ಚಿಕ್ಕಮಗಳೂರು: ಬಾಬಾಬುಡನ್ ಗಿರಿಯ ದತ್ತಪೀಠದಲ್ಲಿ ಹೋಮ-ಹವನ ಮಾಡುವ ಸ್ಥಳ ಇದೀಗ ಮತ್ತೆ ವಿವಾದಕ್ಕೆ ಕಾರಣವಾಗಿದೆ. ಇಲ್ಲಿನ ಹೋಮ-ಹವನ ಮಾಡುವ ಸ್ಥಳದಲ್ಲಿ ಮಾಂಸಾಹಾರ ತಯಾರಿಸಿ ಬಿರಿಯಾನಿ ಊಟ ಮಾಡಿರುವ ಘಟನೆ ಬೆಳಕಿಗೆ ಬಂದಿದ್ದು, ಭಕ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಚಿಕ್ಕಮಗಳೂರಿನ ಬಾಬಾಬುಡನ್ ಗಿರಿಯ ದತ್ತಪೀಠದ ವಿವಾದಿತ ಜಾಗದಲ್ಲಿ ನ್ಯಾಯಾಲಯದ ಆದೇಶ ಉಲ್ಲಂಘನೆ ಮಾಡಿ ಸಮುದಾಯವೊಂದು ಹೋಮ-ಹವನ ಮಾಡುವ ಜಾಗದಲ್ಲಿ ತಾತ್ಕಾಲಿಕ ಶೆಡ್ ಹಾಕಿ ಮಾಂಸಾಹಾರ ತಯಾರಿಸಿದೆ. ಅಲ್ಲದೇ ಗೋರಿಗಳಿಗೆ ಪೂಜೆ ಮಾಡಿದ್ದಾರೆ ಎಂದು ಹಿಂದೂಪರ ಸಂಘಟನೆ ಕಾರ್ಯಕರ್ತರು ಕಿಡಿಕಾರಿದ್ದಾರೆ.
ಹೋಮ-ಹವನ ಮಾಡುವ ಪವಿತ್ರ ಸ್ಥಳದಲ್ಲಿ ಮಾಂಸಾಹಾರ ತಯಾರಿಸಿ ಊಟ ಮಾಡಿರುವ ವಿಡಿಯೋ ಕೂಡ ವೈರಲ್ ಆಗಿದೆ. ವಿವಾದಿತ ಸ್ಥಳದಲ್ಲಿ, ಕೋರ್ಟ್ ಆದೇಶ ಉಲ್ಲಂಘನೆ ಮಾಡಿ ಬಿರಿಯಾನಿ ತಯಾರಿಸಲು ಅವಕಾಶ ನೀಡಿರುವ ಮುಜರಾಯಿ ಇಲಾಖೆ ಅಧಿಕಾರಿಗಳ ವಿರುದ್ಧ ಹಿಂದೂ ಪರ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ. ಅಲ್ಲದೇ ಇದು ಜಿಲ್ಲಾಡಳಿತದ ನಿರ್ಲಕ್ಷವಾಗಿದೆ ಎಂದು ಗುಡುಗಿದ್ದಾರೆ. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಭಕ್ತರು ಹಾಗೂ ಹಿಂದೂ ಪರ ಸಂಘಟನೆ ಕಾರ್ಯಕರ್ತರು ಆಗ್ರಹಿಸಿದ್ದಾರೆ.