
ಚಿಕ್ಕಮಗಳೂರು: ಪ್ರಿಯಕರನೊಂದಿಗೆ ಸೇರಿ ತನ್ನ ಮನೆಯಲ್ಲೇ ಕಳವು ಮಾಡಿದ್ದ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ.
ಶಮಂತಕ ಮಣಿ ಮತ್ತು ಆಕೆಯ ಪ್ರಿಯಕರ ಭರತ್ ಕುಮಾರ್ ಬಂಧಿತ ಆರೋಪಿಗಳಾಗಿದ್ದಾರೆ. ಬಂಧಿತರಿಂದ ಕಳವು ಮಾಡಲಾಗಿದ್ದ ಚಿನ್ನಾಭರಣ ವಶಕ್ಕೆ ಪಡೆಯಲಾಗಿದೆ. ಚಿಕ್ಕಮಗಳೂರು ಜಿಲ್ಲೆ ಬೀರೂರು ಪೊಲೀಸ್ ಠಾಣೆ ವ್ಯಾಪ್ತಿಯ ದೊಡ್ಡಬೋಕಿಕೆರೆಯ ರಾಜೇಶ್ ಅವರ ಪತ್ನಿ ಮತ್ತು ತಾಯಿ ಮನೆಗೆ ಬೀಗ ಹಾಕಿಕೊಂಡು ಹೊಲಕ್ಕೆ ತೆರಳಿದ್ದ ವೇಳೆಯಲ್ಲಿ ಮನೆಯ ಬೀಗ ಮುರಿದು ಒಳ ನುಗ್ಗಿದ ಕಳ್ಳರು ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ದೋಚಿ ಪರಾರಿಯಾಗಿದ್ದರು. ಈ ಕುರಿತಂತೆ ಬೀರೂರು ಠಾಣೆಗೆ ದೂರು ನೀಡಲಾಗಿತ್ತು.
ಇದಾದ ನಂತರದಲ್ಲಿ ರಾಜೇಶ್ ಪತ್ನಿ ಶಮಂತಕಮಣಿ ಮನೆಯಿಂದ ನಾಪತ್ತೆಯಾಗಿದ್ದು, ಪ್ರಿಯಕರ ಭರತ್ ಕುಮಾರ್ ಜೊತೆಗೆ ಹೊಸಪೇಟೆಯಲ್ಲಿ ವಾಸವಾಗಿರುವುದು ಗೊತ್ತಾಗಿದೆ. ಪೊಲೀಸರು ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಚಿನ್ನಾಭರಣ ಕಳವು ಮಾಡಿರುವುದನ್ನು ಒಪ್ಪಿಕೊಂಡಿದ್ದಾರೆ. ಇಬ್ಬರನ್ನೂ ಪೊಲೀಸರು ಬಂಧಿಸಿ ಮುಂದಿನ ಕ್ರಮಕೈಗೊಂಡಿದ್ದಾರೆನ್ನಲಾಗಿದೆ.