ಚಿಕ್ಕಮಗಳೂರು: ರಾಜ್ಯದ ಕರಾವಳಿ ಹಾಗೂ ಮಲೆನಾಡು ಭಾಗದಲ್ಲಿ ಮಳೆಯ ಅಬ್ಬರ ಮುಂದುವರೆದಿದ್ದು, ಹಲವೆಡೆ ಭೂಕುಸಿತ, ಗುಡ್ಡ ಕುಸಿತ ಸಂಭವಿಸಿ ಅವಾಂತರಗಳು ಸೃಷ್ಟಿಯಾಗಿವೆ.
ಚಿಕ್ಕಮಗಳೂರು ಜಿಲ್ಲೆಯಾದ್ಯಂತ ಧಾರಾಕಾರ ಮಳೆಯಾಗುತ್ತಿದ್ದು, ಕೆಲವೆಡೆ ಗುಡ್ಡ ಕುಸಿತ ಸಂಭವಿಸಿದೆ. ಚಾರ್ಮಡಿ ಘಾಟ್ ನ ಕೆಲವೆಡೆ ಎರಡು ದಿನಗಳ ಹಿಂದೆ ಗುಡ್ಡ ಕುಸಿದು ವಾಹನ ಸಂಚಾರಕ್ಕೆ ಅಡ್ಡಿಯುಂಟಾಗಿತ್ತು. ಇದೀಗ ಚಾರ್ಮಡಿ ಘಾಟ್ ರಸ್ತೆಯೇ ಬಿರುಕುಬಿಟ್ಟಿದ್ದು ಕುಸಿಯುವ ಹಂತ ತಲುಪಿದೆ.
ಚಿಕ್ಕಮಗಳೂರಿನ ಕೊಟ್ಟಿಗೆಹಾರ ಸಮೀಪದ ಚಾರ್ಮಡಿ ಘಾಟ್ ರಸ್ತೆಯಲ್ಲಿ ಬಿರುಕು ಕಾಣಿಸಿಕೊಂಡಿದೆ. ಪರಿಣಾಮ ರಸ್ತೆ ಕುಸಿದು ಹೋಗುವ ಭೀತಿ ಉಂಟಾಗಿದೆ. ದಕ್ಷಿಣ ಕನ್ನಡ-ಚಿಕ್ಕಮಗಳೂರು ಸಂಪರ್ಕಿಸುವ ಚಾರ್ಮಡಿ ಘಾಟ್ ರಸ್ತೆ ಇದಾಗಿದೆ.
ಕೆಲ ದಿನಗಳ ಹಿಂದಷ್ಟೇ ರಸ್ತೆ ಕಾಮಗಾರಿ ಈ ಭಾಗದಲ್ಲಿ ನಡೆದಿತ್ತು. ಆದರೆ ಈಗ ಮಳೆಯ ಅಬ್ಬರಕ್ಕೆ ರಸ್ತೆ ಬಿರುಕುಬಿಟ್ಟು ಕುಸಿದು ಹೋಗುವ ಅಪಾಯ ಎದುರಾಗಿದೆ.