ಚಿಕ್ಕಮಗಳೂರು: ಕಾಫಿ ನಾಡು ಚಿಕ್ಕಮಗಳೂರಿನಲ್ಲಿ ಕೆಲ ದಿನಗಳಿಂದ ಕಾಡಾನೆಗಳ ಗುಂಪು ಬೀಟಮ್ಮ ಗ್ಯಾಂಗ್ ದಾಂಧಲೆ ನಡೆಸುತ್ತಿದ್ದು, ಗ್ರಾಮಸ್ಥರಲ್ಲಿ ಆತಂಕ ಮನೆ ಮಾಡಿದೆ. ಕಾದಾನೆಗಳ ದಾಳಿಗೆ ಅಪಾರ ಪ್ರಮಾಣದ ಬೆಳೆಗಳು ಹಾನಿಯಾಗಿವೆ.
ಬೀಟಮ್ಮ ಗ್ಯಾಂಗ್ ದಾಂಧಲೆ ಜಿಲ್ಲೆಯಲ್ಲಿ ಮುಂದುವರೆದಿದ್ದು, ದಿನಕ್ಕೊಂದು ಗ್ರಾಮಗಳಿಗೆ ಲಗ್ಗೆ ಇಡುತ್ತಿವೆ. ಲಕ್ಷಾಂತರ ರೂಪಾಯಿ ಮೌಲ್ಯದ ಬೆಳೆಗಳು ಸಂಪೂರ್ಣ ನಾಶವಾಗಿವೆ. ಇದರಿಂದ ದ್ಸರವಜನಿಕರು ಅರಣ್ಯ ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಚಿಕ್ಕಮಗಳೂರು ಗಡಿ ಭಾಗದಲ್ಲಿ ಬೀಡುಬಿಟ್ಟಿರುವ ಬೀಟಮ್ಮ ಗ್ಯಾಂಗ್ ನ 20ಕ್ಕೂ ಹೆಚ್ಚು ಕಾಡಾನೆಗಳು ದಾಂಧಲೆ ನಡೆಸುತ್ತಿವೆ. ಕಳೆದ ನಾಲ್ಕು ದಿನಗಳಲ್ಲಿ ಮೂಡಿಗೆರೆ ತಾಲೂಕಿನ 5 ಗ್ರಾಮಗಳಲ್ಲಿ ಈ ಗ್ಯಾಂಗ್ ಲಗ್ಗೆ ಇಟ್ಟಿದ್ದು ಕಾಫಿ, ಮೆಣಸು, ಬಾಳೆ ಬೆಳೆಗಳು ನಾಶವಾಗಿವೆ.
ಕಾರ್ ಬೈಲು ಗ್ರಾಮದಲ್ಲಿ ಬರೋಬ್ಬರಿ 10 ಎಕರೆ ಕಾಫಿ ತೋಟಗಳು ನಾಶವಾಗಿವೆ. ಹಲವು ದಿನಗಳಿಂದ ಜಿಲ್ಲೆಯ ಗ್ರಾಮಗಳಲ್ಲಿ ಕಾಡಾನೆಗಳ ಹಿಂಡು ದಾಳಿ ನಡೆಸುತ್ತಿದ್ದರೂ ಅರಣ್ಯ ಇಲಾಖೆ ಸೂಕ್ತ ಕ್ರಮ ಕೈಗೊಳ್ಳದೇ ಕೈಚೆಲ್ಲಿ ಕುಳಿತಿದೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.