ಚಿಕ್ಕಮಗಳೂರು: ಸಂಚಾರ ನಿಯಮ ಉಲ್ಲಂಘನೆಗಾಗಿ ನ್ಯಾಯಾಧೀಶರು ದಂಡ ವಿಧಿಸಿದ್ದಕ್ಕೆ ಆಕ್ರೋಶಗೊಂಡ ವ್ಯಕ್ತಿಯೊಬ್ಬ ನ್ಯಾಯಾಲಯದಲ್ಲಿ ಕೂಗಾಡಿ ಜಡ್ಜ್ ಮೇಲೆಯೇ ಚಪ್ಪಲಿ ಎಸೆದಿದ್ದಾನೆ.
ಚಿಕ್ಕಮಗಳೂರಿನ ಒಂದನೇ ಹೆಚ್ಚುವರಿ ಕಿರಿಯ ಶ್ರೇಣಿ ನ್ಯಾಯಾಲಯದಲ್ಲಿ ಘಟನೆ ನಡೆದಿದೆ. ಆರೋಪಿ ಲೋಕೇಶ್ ತಿಂಗಳ ಹಿಂದೆ ಮದ್ಯ ಸೇವನೆ ಮಾಡಿ ವಾಹನ ಚಾಲನೆ ಮಾಡಿದ್ದ ವೇಳೆಯಲ್ಲಿ ಸಂಚಾರ ಠಾಣೆ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದ. ಡ್ರಿಂಕ್ ಅಂಡ್ ಡ್ರೈವ್ ಕೇಸ್ ದಾಖಲಾಗಿ ಕೋರ್ಟ್ ನಲ್ಲಿ ದಂಡ ಕಟ್ಟಿದ್ದ.
ನ್ಯಾಯಾಲಯದಲ್ಲಿ 5000 ರೂ.ದಂಡ ವಿಧಿಸಿದ್ದಕ್ಕೆ ಆಕ್ರೋಶಗೊಂಡ ಲೋಕೇಶ್ ಕುಡಿದು ನ್ಯಾಯಾಲಯಕ್ಕೆ ಬಂದು ಕೂಗಾಡಿದ್ದಾನೆ. ನ್ಯಾಯಾಧೀಶರ ಮೇಲೆ ಚಪ್ಪಲಿ ಎಸೆದಿದ್ದಾನೆ. ಕೂಡಲೇ ಕಾರ್ಯ ಪ್ರವೃತ್ತರಾದ ಪೊಲೀಸರು ಆತನನ್ನು ಬಂಧಿಸಿದ್ದಾರೆ. ಚಿಕ್ಕಮಗಳೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಘಟನೆಯ ಬಗ್ಗೆ ವಕೀಲರು ಆಕ್ರೋಶ ವ್ಯಕ್ತಪಡಿಸಿದ್ದಾರೆ.