ಚಿಕ್ಕಬಳ್ಳಾಪುರ: ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಳೆಯ ಅಬ್ಬರಕ್ಕೆ ಅವಾಂತರಗಳು ಸೃಷ್ಟಿಯಾಗಿವೆ. ತಡರಾತ್ರಿ ಸುರಿದ ಬಿರುಗಾಳಿ ಸಹಿತ ವರುಣಾರ್ಭಟಕ್ಕೆ ಎರಡು ಕಾರುಗಳು ಕಾಲುವೆ ನೀರಿನ ರಭಸಕ್ಕೆ ಕೊಚ್ಚಿ ಹೋಗಿರುವ ಘಟನೆ ಚಿಕ್ಕಬಳ್ಳಾಪುರದ ಜಿಲ್ಲೆಯ ಬೆಂಗಳೂರು-ಹೈದರಾಬಾದ್ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.
ದೇವನಹಳ್ಳಿ ಬಳಿಯ ನಾಗಾರ್ಜುನ ಕಾಲೇಜು ಬಳಿಯ ಅಂಡರ್ ಪಾಸ್ ನಲ್ಲಿ ಮಾರುತಿ ಅಸ್ಟರ್ ಕಾರು ಸಂಪೂರ್ಣವಾಗಿ ಮುಳುಗಡೆಯಾಗಿದ್ದು, ಇನ್ನೊಂದು ಕಾರು ದಡದಲ್ಲಿ ಸಿಲುಕಿಕೊಂಡಿದೆ.
ಧಾರಾಕಾರ ಮಳೆಯಿಂದಾಗಿ ರಸ್ತೆಗಳಿಗೆ ಕಾಲು ನೀರು ನುಗ್ಗಿದ್ದು, ಹುರಳಗುರ್ಕಿ ಗ್ರಾಮದ ವ್ಯಕ್ತಿಯೋರ್ವರು ಕುಟುಂಬದವರನ್ನು ಕಾರಿನಲ್ಲಿ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದರು. ಈ ವೇಳೆ ನೀರಿನ ರಭಸಕ್ಕೆ ಚಾಲಕನ ನಿಯಂತ್ರಣ ತಪ್ಪಿದ ಕಾರು ಕಾಲುವೆ ನೀರಲ್ಲಿ ಕೊಚ್ಚಿ ಹೋಗಿದೆ.
ಅದೃಷ್ಟವಶಾತ್ ಕಾರಿನಲ್ಲಿದ್ದ 6 ಜನರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸದ್ಯ ವರುಣಾರ್ಭಟ ಇಂದು ಕೊಂಚ ಕಡಿಮೆಯಾಗಿದ್ದು, ನೀರಿನ ಪ್ರಮಾಣ ತಗ್ಗಿದೆ.