ಚಿಕ್ಕಬಳ್ಳಾಪುರ: ಸರ್ಕಾರಿ ಸ್ವಾಮ್ಯದ ಪ್ರತಿಷ್ಠಿತ ಬ್ಯಾಂಕ್ ಎಸ್ ಬಿಐನಲ್ಲಿದ್ದ ಗ್ರಾಹಕರ ಖಾತೆಯ ಹಣಕ್ಕೆ ಬ್ಯಾಂಕ್ ನ ಮಹಿಳಾ ಸಿಬ್ಬಂದಿಯೊಬ್ಬರು ಕನ್ನ ಹಾಕಿರುವ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ.
ಚಿಕ್ಕಬಳ್ಳಾಪುರದ ಬಿ.ಬಿ.ರಸ್ತೆಯಲ್ಲಿರುವ ಆರ್ ವಿ ಕಾಂಪ್ಲೆಕ್ಸ್ ಶಾಖೆಯ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಶಾಖೆಯ ಗ್ರಾಹಕರ ಖಾತೆಗೆ ಕನ್ನ ಹಾಕಲಾಗಿದೆ. ಗ್ರಾಹಕರ ಖಾತೆಯಲ್ಲಿದ್ದ ಹಣವನ್ನು ರಕ್ಷಣೆ ಮಡಬೇಕಿರುವ ಸಿಬ್ಬಂದಿಯೇ ಬರೋಬ್ಬರಿ 27,69,470 ರೂಪಾಯಿ ಹಣವನ್ನು ತನ್ನ ಸಂಬಂಧಿಕರ ಖಾತೆಗೆ ವರ್ಗಾವಣೆ ಮಾಡಿದ್ದಾರೆ.
ಬ್ಯಾಂಕಿನ ಬಿ.ಜಿ.ಎಲ್ ಖಾತೆ, ಪಾರ್ಕಿಂಗ್ ಖಾತೆ, ಸಾಲದ ಖಾತೆಗಳು ಸೇರಿದಂತೆ ಇತರೆ ಖಾತೆದಾರರ ಖಾತೆಗಳಿಂದ ಅಕ್ರಮವಾಗಿ ಹಣ ವರ್ಗಾಯಿಸಲಾಗಿದೆ.
2014ರಿಂದ 2019ವರೆಗೆ ಬ್ಯಾಂಕ್ ನಲ್ಲಿ ಕ್ಲರ್ಕ್ ಆಗಿದ್ದ ಆರ್.ರಶ್ಮಿ ಕೋರ್ ಬ್ಯಾಂಕ್ ಸಿಸ್ಟಮ್ ನ್ನು ದುರುಪಯೋಗಪಡಿಸಿಕೊಂಡು ಈ ಕೃತ್ಯವೆಸಗಿದ್ದಾರೆ. ತನ್ನ ಪತಿ, ತನ್ನ ತಂದೆ-ತಾಯಿ, ತಂಗಿ ಸೇರಿದಂತೆ ಹಲವು ಸಂಬಂಧಿಕರ ಖಾತೆಗೆ ವರ್ಗಾಯಿಸಿದ್ದಾರೆ. ಆಂತರಿಕ ತನಿಖೆಯಲ್ಲಿ ವಿಷಯ ತಡವಾಗಿ ಬೆಳಕಿಗೆ ಬಂದಿದೆ.
ರಶ್ಮಿ ವಿರುದ್ಧ ಬ್ಯಾಂಕ್ ಮ್ಯಾನೇಜರ್ ಇಶಾನಿ ಚಟ್ಟೋರಾಜ್ ಚಿಕ್ಕಬಳ್ಳಾಪುರ ನಗರಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.