
ಚಿಕ್ಕಬಳ್ಳಾಪುರ: ರಸ್ತೆ ದಾಟುತ್ತಿದ್ದ ಬಾಲಕನೊಬ್ಬ ಕರೆಂಟ್ ಶಾಕ್ ಹೊಡೆದು ಸಾವನ್ನಪ್ಪಿರುವ ದಾರುಣ ಘಟನೆ ಚಿಕ್ಕಬಳ್ಳಾಪುರದ ಮಂಚೇನಹಳ್ಳಿಯಲ್ಲಿ ನಡೆದಿದೆ.
8 ವರ್ಷದ ನಾಗೇಂದ್ರ ಮೃತ ಬಾಲಕ. ಮಂಚೇನಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ಮುಂಭಾಗವೇ ಈ ದುರಂತ ಸಂಭವಿಸಿದೆ. ರಸ್ತೆ ದಾಟುತ್ತಿದ್ದ ವೇಳೆ ಟ್ರಾನ್ಸ್ ಫಾರ್ಮರ್ ಗ್ರೌಂಡಿಂಗ್ ವೈಯರ್ ತಗುಲಿ ಬಾಲಕ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.
ರಸ್ತೆ ಅಗಲೀಕರಣಕ್ಕೆಂದು ಟ್ರಾನ್ಸ್ ಫಾರ್ಮರ್ ಬಳಿ ಮಣ್ಣು ತೆಗೆಯಲಾಗಿತ್ತು. ಇದರಿಂದ ಹೊಂಡದಲ್ಲಿ ನೀರು ತುಂಬಿಕೊಂಡಿದೆ. ಇದರಿಂದಾಗಿ ವಿದ್ಯುತ್ ಟ್ರಾನ್ಸ್ ಫಾರ್ಮರ್ ಬಳಿ ರಸ್ತೆಯಲ್ಲಿಯೂ ವಿದ್ಯುತ್ ಪ್ರವಹಿಸುತ್ತಿದ್ದು, ಅರಿಯದೆ ಬಾಲಕ ಅದೇ ಜಾಗದಲ್ಲಿ ಸಾಗಿದ್ದಾನೆ. ಕರೆಂಟ್ ಶಾಕ್ ಗೆ ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದಾನೆ.
ಮಂಚೇನಹಳ್ಳಿ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.