ಚಿಕ್ಕಬಳ್ಳಾಪುರದ ಹಿರೇನಾಗವೇಲಿ ಬಳಿ ಜಿಲೆಟಿನ್ ಸ್ಪೋಟದಿಂದ ಹತ್ತಾರು ಕಿಲೋಮೀಟರ್ ದೂರದವರೆಗೆ ಭೂಮಿ ಕಂಪಿಸಿದ ಅನುಭವವಾಗಿದೆ. ಜನ ಭೂಕಂಪ ಎಂದು ಭಾವಿಸಿ ಮನೆಯಿಂದ ಹೊರಗೆ ಓಡಿ ಬಂದಿದ್ದಾರೆ.
ನಂತರ ಜಿಲೆಟಿನ್ ಸ್ಪೋಟ ಸಂಭವಿಸಿದೆ ಎನ್ನುವ ಮಾಹಿತಿ ಗೊತ್ತಾಗಿದೆ. ಹಿರೇನಾಗವೇಲಿ ಗ್ರಾಮಸ್ಥರು ಸ್ಥಳಕ್ಕೆ ದೌಡಾಯಿಸಿದ್ದಾರೆ. 2008 ರಿಂದ ಜಿಲೆಟಿನ್ ಸ್ಪೋಟದಿಂದ ತೊಂದರೆಯಾಗುತ್ತಿರುವ ಬಗ್ಗೆ ಗ್ರಾಮಸ್ಥರು ಮಾಹಿತಿ ನೀಡಿದ್ದಾರೆ.
ಜಿಲೆಟಿನ್ ಸ್ಫೋಟದ ಸದ್ದಿನಿಂದ ರಾತ್ರಿಯಿಡಿ ನಿದ್ದೆ ಮಾಡದೆ ಜನ ಆತಂಕದಿಂದ ಕಾಲ ಕಳೆದಿದ್ದಾರೆ. ಹುಣಸೋಡು ನಂತರ ರಾಜ್ಯದಲ್ಲಿ ಮತ್ತೊಂದು ಜಿಲೆಟಿನ್ ಸ್ಪೋಟ ದುರಂತ ಸಂಭವಿಸಿದೆ. ಅಕ್ರಮವಾಗಿ ಸಾಗಿಸುತ್ತಿದ್ದ ವೇಳೆ ಜಿಲೆಟಿನ್ ಸ್ಫೋಟಗೊಂಡಿದೆ.
ಬ್ರಹ್ಮರವರ್ಷಿಣಿ ಕಲ್ಲುಕ್ವಾರಿ ಸ್ಫೋಟದಲ್ಲಿ ಐವರು ಮೃತಪಟ್ಟಿದ್ದಾರೆ. ಒಬ್ಬ ವ್ಯಕ್ತಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಬ್ರಹ್ಮರವರ್ಷಿಣಿ ಕಲ್ಲುಕ್ವಾರಿಯಲ್ಲಿ ಸ್ಫೋಟಕ್ಕೆ ಅನುಮತಿ ಪಡೆದಿಲ್ಲ. ಅಕ್ರಮವಾಗಿ ಸ್ಪೋಟಕ ಬಳಸಲಾಗುತ್ತಿತ್ತು. ಈ ಹಿಂದೆಯೂ ಕ್ವಾರಿ ಕ್ರಷರ್ ಮೇಲೆ ದಾಳಿ ಮಾಡಲಾಗಿತ್ತು. ಕಂಪ್ರೆಸರ್ ಜಪ್ತಿಗೆ ನಿನ್ನೆಯಷ್ಟೇ ಪೊಲೀಸರು ತೆರಳಿದ್ದ ಹಿನ್ನೆಲೆಯಲ್ಲಿ ಪೊಲೀಸರ ಕಣ್ಣುತಪ್ಪಿಸಿ ಜಿಲೆಟಿನ್ ಕಡ್ಡಿಯನ್ನು ಬಚ್ಚಿಟ್ಟಿದ್ದರು. ಬಚ್ಚಿಟ್ಟಿದ್ದ ಜಿಲೆಟಿನ್ ಸಾಗಿಸಲು ಬಂದ ವೇಳೆಯಲ್ಲಿ ಸ್ಪೋಟ ಸಂಭವಿಸಿದೆ. ಕ್ವಾರಿ ಮಾಲೀಕರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಚಿಕ್ಕಬಳ್ಳಾಪುರ ಎಸ್ಪಿ ಮಿಥುನ್ ಕುಮಾರ್ ಹೇಳಿದ್ದಾರೆ.