ಬೆಂಗಳೂರು: ರಾಜ್ಯದಲ್ಲಿರುವ ಉದ್ಯಮಗಳು ತಯಾರಿಸುವ ಉತ್ಪನ್ನಗಳ ಮೇಲೆ ಕನ್ನಡದಲ್ಲೂ ಮುದ್ರಣ ಕಡ್ಡಾಯ ಮಾಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ವಿಧಾನಸೌಧ ಮುಂಭಾಗದ ಮೆಟ್ಟಿಲುಗಳ ಮೇಲೆ ಶುಕ್ರವಾರ ನಡೆದ ರಾಜ್ಯೋತ್ಸವ ಹಾಗೂ ಸುವರ್ಣ ಮಹೋತ್ಸವ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.
ರಾಜ್ಯದಲ್ಲಿನ ಉದ್ಯಮಗಳು ತಯಾರಿಸುವ ಉತ್ಪನ್ನಗಳ ಮೇಲೆ ಇಂಗ್ಲಿಷ್ ನಲ್ಲಿ ಮಾತ್ರ ಹೆಸರು ಮುದ್ರಿತವಾಗಿರುತ್ತದೆ. ಇನ್ನು ಮುಂದೆ ಕನ್ನಡದಲ್ಲಿ ಹೆಸರು ಮುದ್ರಿಸುವುದನ್ನು ಕಡ್ಡಾಯಗೊಳಿಸಲಾಗುವುದು. ಮೈಸೂರು ಜಿಲ್ಲಾಧಿಕಾರಿ ಕಚೇರಿ ಇದ್ದ ಕಟ್ಟಡವನ್ನು ಅಠಾರ ಕಚೇರಿ ಎಂದು ಕರೆಯುತ್ತಾರೆ. ಆ ಕಟ್ಟಡದಲ್ಲಿ ಕನ್ನಡ ಸಂಗ್ರಹಾಲಯ ಸ್ಥಾಪಿಸಲಾಗುವುದು ಎಂದರು.
ಬೇರೆ ರಾಜ್ಯದಿಂದ ಜನ ಬಂದರೂ ಅವರಿಗೆ ಕನ್ನಡ ಕಲಿಸಬೇಕು. ಕನ್ನಡದಲ್ಲಿ ವ್ಯವಹಾರ ಮಾಡುವಂತೆ ಮಾಡಬೇಕು. ಇಂತಹ ಕೆಲಸವನ್ನು ಸರ್ಕಾರ ಮಾಡಲಿದ್ದು, ನಾಗರೀಕರು ಕೂಡ ಎಲ್ಲರಿಗೂ ಕನ್ನಡ ಕಲಿಸುತ್ತೇವೆ ಎಂದು ಪ್ರಮಾಣ ಮಾಡಬೇಕೆಂದು ಹೇಳಿದ್ದಾರೆ.