ಬೆಂಗಳೂರು: ನಾಡದೇವತೆ ಮೈಸೂರು ಚಾಮುಂಡೇಶ್ವರಿಗೆ ಚಿನ್ನದ ರಥ ನಿರ್ಮಿಸುವ ಸಂಬಂಧ ಪ್ರಸ್ತಾವನೆ ಸಲ್ಲಿಸಲು ಧಾರ್ಮಿಕ ದತ್ತಿ ಇಲಾಖೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ.
ವಿಧಾನಪರಿಷತ್ ಸದಸ್ಯ ದಿನೇಶ್ ಗೂಳಿಗೌಡ ಅವರು ಈ ಕುರಿತು ಮನವಿ ಮಾಡಿದ್ದು, ಮುಖ್ಯಮಂತ್ರಿಗಳು ಸ್ಪಂದಿಸಿ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ನಿರ್ದೇಶನ ನೀಡಿದ್ದಾರೆ.
ಕನ್ನಡ ನಾಡಿನ ಅಸ್ಮಿತೆಯಾಗಿರುವ ಚಾಮುಂಡೇಶ್ವರಿ ದೇವಿಗೆ ಪೌರಾಣಿಕ ಮತ್ತು ಐತಿಹಾಸಿಕ ಹಿನ್ನೆಲೆ ಇದೆ. ಹೀಗಾಗಿ ದಸರಾವನ್ನು ನಾಡಹಬ್ಬವಾಗಿ ಆಚರಿಸಲಾಗುತ್ತಿದೆ. ನಾಡ ದೇವತೆಯನ್ನು ಚಿನ್ನದ ರಥದಲ್ಲಿ ಕೂರಿಸಿ ಮೆರೆಸಬೇಕು ಎನ್ನುವುದು ಭಕ್ತರ ಬೇಡಿಕೆಯಾಗಿದೆ. ಹೀಗಾಗಿ ಚಿನ್ನದ ರಥ ನಿರ್ಮಿಸಬೇಕು ಎಂದು ದಿನೇಶ್ ಗೌಳಿ ಗೌಡ ಸಿಎಂಗೆ ಮನವಿ ಮಾಡಿದ್ದರು.
ಚಿನ್ನದ ರಥ ನಿರ್ಮಾಣಕ್ಕೆ ಅಂದಾಜು ವೆಚ್ಚದ ಪ್ರಸ್ತಾವನೆಯನ್ನು ಸರ್ಕಾರ ಸಿದ್ಧಪಡಿಸಬೇಕು. ದೇವಾಲಯದಲ್ಲಿ ಈ ಉದ್ದೇಶಕ್ಕಾಗಿ ಪ್ರತ್ಯೇಕ ಹುಂಡಿ ಇಟ್ಟು ಭಕ್ತರು ಹಣ ಹಾಗೂ ಚಿನ್ನವನ್ನು ದೇಣಿಗೆಯಾಗಿ ನೀಡಲು ಅವಕಾಶ ಕಲ್ಪಿಸಬೇಕು. ಸಂಗ್ರಹವಾದ ಹಣದ ಜೊತೆಗೆ ರಥದ ನಿರ್ಮಾಣಕ್ಕೆ ಅಗತ್ಯವಾದ ಹೆಚ್ಚುವರಿ ಮೊತ್ತವನ್ನು ಸರ್ಕಾರ ಭರಿಸಬೇಕು ಎಂದು ದಿನೇಶ್ ಗೂಳಿಗೌಡ ಸಲಹೆ ನೀಡಿದ್ದರು.
ಮುಂದಿನ ದಸರಾ ಮಹೋತ್ಸವದೊಳಗೆ ಸ್ವರ್ಣ ರಥ ನಿರ್ಮಾಣಕ್ಕೆ ಅವರು ಕೋರಿದ್ದು, ಮನವಿಗೆ ಸ್ಪಂದಿಸಿ ಸಿಎಂ ಪ್ರಸ್ತಾವನೆ ಸಲ್ಲಿಸಲು ಧಾರ್ಮಿಕ ದತ್ತಿ ಇಲಾಖೆಗೆ ಸೂಚನೆ ನೀಡಿದ್ದಾರೆ.