ಬೆಂಗಳೂರು: ಬರಗಾಲ, ತಾಪಮಾನ ಹೆಚ್ಚಳ, ನೀರಿನ ಅಭಾವ, ಉತ್ಪಾದನೆ ಕುಂಠಿತ ಮತ್ತು ಪೂರೈಕೆಯಲ್ಲಿ ವ್ಯತ್ಯಯದ ಕಾರಣದಿಂದ ಕೋಳಿ ಮಾರಾಟ ದರ ಹೆಚ್ಚಳವಾಗಿದೆ.
ಕರ್ನಾಟಕ ಪೌಲ್ಟ್ರಿ ಟ್ರೇಡರ್ಸ್ ಅಸೋಸಿಯೇಷನ್ ಅಧ್ಯಕ್ಷ ಕೆ.ಎನ್. ನಾಗರಾಜು ಈ ಬಗ್ಗೆ ಮಾಹಿತಿ ನೀಡಿದ್ದಾರೆ. ತಾಪಮಾನ ಹೆಚ್ಚಳ, ನೀರಿನ ಅಭಾವದ ಕಾರಣ ಕೋಳಿ ಸಾಕಾಣಿಕೆಗೆ ಹಿನ್ನಡೆಯಾಗಿದ್ದು, ಉತ್ಪಾದನೆ ಕುಂಠಿತವಾಗಿದೆ.
ಯುಗಾದಿ, ರಂಜಾನ್, ಮಾರಿ ಹಬ್ಬ, ಜಾತ್ರೆಗಳು, ಊರ ಹಬ್ಬಗಳು ಇರುವುದರಿಂದ ಕೋಳಿಗಳಿಗೆ ಬೇಡಿಕೆ ಹೆಚ್ಚಾಗಿದೆ. ಹೀಗಾಗಿ ಕೋಳಿ ಸಾಕಾಣಿಕೆ ಕಂಪನಿಗಳು ಸಾಮಾನ್ಯ ದರಕ್ಕಿಂತ ಹೆಚ್ಚಿನ ದರದಲ್ಲಿ ಕೋಳಿಗಳನ್ನು ಮಾರಾಟ ಮಾಡುತ್ತಿವೆ.
ಈ ಹಿಂದೆ ಪ್ರತಿ ಕೆಜಿ ಜೀವಂತ ಕೋಳಿಗೆ 170 ರೂ.ವರೆಗೆ ದರ ಇತ್ತು. ಅದು 220 ರೂ.ಗೆ ತಲುಪಿದೆ. ಕೋಳಿ ಮಾಂಸ ಕೆಜಿಗೆ 260 ರೂ. ನಿಂದ 330 ರೂ.ವರೆಗೆ ಏರಿಕೆಯಾಗಿದ್ದು, ರಿಟೇಲ್ ಅಂಗಡಿಗಳಲ್ಲಿ ಅನಿವಾರ್ಯವಾಗಿ ಹೆಚ್ಚಿನ ದರಕ್ಕೆ ಕೋಳಿ ಮಾರಾಟ ಮಾಡಲಾಗುತ್ತಿದೆ. ಇದರಿಂದಾಗಿ ಗ್ರಾಹಕರಿಗೆ ಬೆಲೆ ಏರಿಕೆ ಬಿಸಿ ತಟ್ಟಿದೆ.