
ಶಿವಮೊಗ್ಗ: ಶಿವಮೊಗ್ಗ ಜಿಲ್ಲೆ ಹೊಳೆಹೊನ್ನೂರು ಪೊಲೀಸ್ ಠಾಣೆ ವ್ಯಾಪ್ತಿಯ ಚಂದನಕೆರೆ ಗ್ರಾಮದಲ್ಲಿ ಕೋಳಿ ಸಾರು ಊಟಕ್ಕೆ ಬಂದವರು ಕ್ಷುಲ್ಲಕ ಕಾರಣಕ್ಕೆ ಬಡಿಗೆಯಲ್ಲಿ ಹೊಡೆದಾಡಿಕೊಂಡ ಘಟನೆ ನಡೆದಿದೆ.
ಚಂದನಕೆರೆಯ ಯಶವಂತರಾವ್ ಅವರು ಮನೆಗೆ ಬಂದಿದ್ದ ಸ್ನೇಹಿತನಿಗಾಗಿ ಗ್ರಾಮದ ದೇವೇಂದ್ರಪ್ಪನವರ ಮನೆಯಲ್ಲಿ ಕೋಳಿ ಸಾರಿನ ಅಡುಗೆ ಮಾಡಿಸಿದ್ದಾರೆ. ರಾತ್ರಿ ದೇವೇಂದ್ರಪ್ಪ ಅವರ ಮನೆಯಲ್ಲಿ ಸ್ನೇಹಿತನೊಂದಿಗೆ ಯಶವಂತರಾವ್ ಊಟ ಮಾಡುತ್ತಿದ್ದ ಸಂದರ್ಭದಲ್ಲಿ ಪರಿಚಿತರಾದ ರಾಕೇಶ ಮತ್ತು ಸಂತೋಷ ಕೂಡ ಬಂದಿದ್ದು ಅವರಿಗೂ ಊಟ ಮಾಡುವಂತೆ ಕರೆದಿದ್ದಾರೆ.
ಸಂತೋಷ್ ಊಟ ಮಾಡಿದ್ದು, ಊಟ ಮಾಡದ ರಾಕೇಶ್ ಯಶವಂತರಾವ್ ಜೊತೆಗೆ ಜಗಳವಾಡಿ ಹಲ್ಲೆ ನಡೆಸಿದ್ದಾನೆ. ದೇವೇಂದ್ರಪ್ಪ ಮತ್ತು ಸ್ನೇಹಿತ ಜಗಳ ಬಿಡಿಸಿ ಕಳುಹಿಸಿದ್ದಾರೆ. ಊಟದ ನಂತರ ಸ್ನೇಹಿತನನ್ನು ಬಿಡಲು ಹೋದಾಗ ದಾರಿ ಮಧ್ಯ ಅಡ್ಡ ಹಾಕಿದ ರಾಕೇಶ ಮತ್ತು ಸಂತೋಷ ಕಲ್ಲುಗಳಿಂದ ಯಶವಂತರಾವ್ ಮೇಲೆ ಹಲ್ಲೆ ಮಾಡಿದ್ದಾರೆ. ಹೊಳೆಹೊನ್ನೂರು ಠಾಣೆ ಪೊಲೀಸರಿಗೆ ದೂರು ನೀಡಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.