ನವದೆಹಲಿ: ಭೂಗತ ಪಾತಕಿ ಛೋಟಾ ರಾಜನ್ ಸಾವಿನ ಸುದ್ದಿಯನ್ನು ಏಮ್ಸ್ ಅಧಿಕಾರಿ ನಿರಾಕರಿಸಿದ್ದಾರೆ. ಛೋಟಾ ರಾಜನ್ ಮೃತಪಟ್ಟಿರುವುದಾಗಿ ಮಾಧ್ಯಮಗಳಲ್ಲಿ ವರದಿಯಾಗಿದ್ದು, ಜಾಲತಾಣಗಳಲ್ಲಿ ಸುದ್ದಿ ವೈರಲ್ ಆಗಿದೆ. ಆದರೆ, ಛೋಟಾ ರಾಜನ್ ಜೀವಂತವಾಗಿರುವುದಾಗಿ ಅಧಿಕಾರಿ ಹೇಳಿದ್ದಾರೆ.
ಕೊರೋನಾ ಸೋಂಕಿನಿಂದ 61 ವರ್ಷದ ಛೋಟಾ ರಾಜನ್ ಮೃತಪಟ್ಟಿರುವುದಾಗಿ ಹೇಳಲಾಗಿತ್ತು. 2015 ರಲ್ಲಿ ಇಂಡೋನೇಷ್ಯಾದಿಂದ ಗಡಿಪಾರು ಆದ ನಂತರ ಆತನನ್ನು ಬಂಧಿಸಿ ನವದೆಹಲಿಯ ಹೈಸೆಕ್ಯುರಿಟಿ ತಿಹಾರ್ ಜೈಲಿನಲ್ಲಿ ಇರಿಸಲಾಗಿತ್ತು.
ಮುಂಬೈನಲ್ಲಿ ಆತನ ವಿರುದ್ಧ ದಾಖಲಾಗಿರುವ ಎಲ್ಲಾ ಪ್ರಕರಣಗಳನ್ನು ಸಿಬಿಐಗೆ ವರ್ಗಾಯಿಸಲಾಗಿದ್ದು, ಅನೇಕ ಪ್ರಕರಣಗಳ ವಿಚಾರಣೆಗೆ ವಿಶೇಷ ನ್ಯಾಯಾಲಯ ರಚಿಸಲಾಗಿದೆ. ಇತ್ತೀಚೆಗೆ ಕೊರೋನಾ ಪರೀಕ್ಷೆಯಲ್ಲಿ ಪಾಸಿಟಿವ್ ಬಂದ ನಂತರ ಛೋಟಾ ರಾಜನ್ ನನ್ನು ಏಮ್ಸ್ ಗೆ ದಾಖಲಿಸಲಾಗಿದ್ದು ವಿಡಿಯೋ ಕಾನ್ಫರೆನ್ಸ್ ಮೂಲಕ ಆತನನ್ನು ವಿಚಾರಣೆಗೆ ಹಾಜರುಪಡಿಸಲು ಸಾಧ್ಯವಿಲ್ಲ ಎಂದು ತಿಹಾರ್ ಜೈಲಿನ ಸಹಾಯಕ ಜೈಲರ್ ಸೆಷನ್ಸ್ ನ್ಯಾಯಾಲಯಕ್ಕೆ ಮಾಹಿತಿ ನೀಡಿದ್ದಾರೆ.
ಇಂದು ಚಿಕಿತ್ಸೆ ಫಲಿಸದೇ ಆತ ಮೃತಪಟ್ಟಿದ್ದಾನೆ ಎಂದು ಹೇಳಲಾಗಿತ್ತು. ಆದರೆ, ಛೋಟಾ ರಾಜನ್ ಜೀವಂತವಾಗಿದ್ದಾನೆ ಎಂದು ಹೇಳಿರುವ ಅಧಿಕಾರಿ ಆತನ ಸಾವಿನ ವರದಿಗಳನ್ನು ನಿರಾಕರಿಸಿದ್ದಾರೆ.