ಛತ್ತೀಸ್ ಗಢದ ಸುಕ್ಮಾ ಜಿಲ್ಲೆಯಲ್ಲಿ ನಡೆದ ಐಇಡಿ ಸ್ಫೋಟದಲ್ಲಿ ಇಬ್ಬರು ಸಿಆರ್‌ಪಿಎಫ್ ಯೋಧರು ಹುತಾತ್ಮರಾಗಿದ್ದಾರೆ.
ಸುಕ್ಮಾ ಜಿಲ್ಲೆಯ ಜಾಗರಗುಂದ ಪೊಲೀಸ್ ಠಾಣೆ ವ್ಯಾಪ್ತಿಯ ಸಿಲ್ಗರ್ ಮತ್ತು ಟೇಕುಲಗುಡೆಂ ನಡುವೆ ಸುಧಾರಿತ ಸ್ಫೋಟಕ ಸಾಧನವನ್ನು(ಐಇಡಿ) ನಕ್ಸಲೀಯರು ಇರಿಸಿದ್ದರು. ಇಂದು ಐಇಡಿ ಸ್ಫೋಟಗೊಂಡು ಕೇಂದ್ರೀಯ ಮೀಸಲು ಪೊಲೀಸ್ ಪಡೆ(ಸಿಆರ್‌ಪಿಎಫ್) ಕೋಬ್ರಾ 201 ಬೆಟಾಲಿಯನ್‌ನ ಕನಿಷ್ಠ ಇಬ್ಬರು ಯೋಧರು ಹುತಾತ್ಮರಾಗಿದ್ದಾರೆ.
ಸುಕ್ಮಾದಲ್ಲಿ ಭಾನುವಾರ ನಕ್ಸಲೀಯರು ಸುಧಾರಿತ ಸ್ಫೋಟಕ ಸಾಧನದೊಂದಿಗೆ ಟ್ರಕ್ ಅನ್ನು ಸ್ಫೋಟಿಸಿದ ನಂತರ ಸಿಆರ್‌ಪಿಎಫ್‌ನ ಜಂಗಲ್ ವಾರ್ಫೇರ್ ಯುನಿಟ್ ಕೋಬ್ರಾದ ಇಬ್ಬರು ಸಿಬ್ಬಂದಿ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ರಾಜ್ಯದ ರಾಜಧಾನಿ ರಾಯ್‌ಪುರದಿಂದ 400 ಕಿಮೀ ದೂರದಲ್ಲಿರುವ ಭದ್ರತಾ ಪಡೆಗಳ ಸಿಲ್ಗರ್ ಮತ್ತು ಟೇಕಲ್‌ಗುಡೆಂ ಶಿಬಿರಗಳ ನಡುವೆ ತಿಮ್ಮಾಪುರಂ ಗ್ರಾಮದ ಬಳಿ ಮಧ್ಯಾಹ್ನ 3 ಗಂಟೆ ಸುಮಾರಿಗೆ ನಕ್ಸಲ್ ಸ್ಫೋಟ ಸಂಭವಿಸಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ರೆಸಲ್ಯೂಟ್ ಆಕ್ಷನ್ ಗಾಗಿ ಕಮಾಂಡೋ ಬೆಟಾಲಿಯನ್‌ನ 201 ನೇ ಘಟಕದ ಯೋಧರು ಟೇಕಲ್ ಗುಡೆಮ್ ಕಡೆಗೆ ಕರ್ತವ್ಯದ ಭಾಗವಾಗಿ ಟ್ರಕ್ ಮತ್ತು ಮೋಟಾರ್ ಸೈಕಲ್‌ಗಳಲ್ಲಿ ತೆರಳುತ್ತಿದ್ದಾಗ ನಕ್ಸಲೀಯರು ಟ್ರಕ್ ಗುರಿಯಾಗಿಸಿಕೊಂಡು ಐಇಡಿ ಸ್ಫೋಟಿಸಿದ್ದಾರೆ. ಕಾನ್‌ಸ್ಟೆಬಲ್ ಶೈಲೇಂದ್ರ(29) ಮತ್ತು ವಾಹನ ಚಾಲಕ ವಿಷ್ಣು ಆರ್.(35) ಅವರು ಮೃತಪಟ್ಟಿದ್ದಾರೆ. ಹೆಚ್ಚಿನ ಪಡೆಗಳನ್ನು ಸ್ಥಳಕ್ಕೆ ಕಳಿಸಲಾಗಿದೆ. ಮೃತದೇಹಗಳನ್ನು ಅರಣ್ಯದಿಂದ ಸ್ಥಳಾಂತರಿಸಲಾಗುತ್ತಿದೆ. ಈ ಪ್ರದೇಶದಲ್ಲಿ ಶೋಧ ಕಾರ್ಯಾಚರಣೆ ನಡೆಯುತ್ತಿದೆ ಎಂದು ಅವರು ಹೇಳಿದ್ದಾರೆ.