ಜನ್ಮಾಷ್ಟಮಿ ಪ್ರಯುಕ್ತ ಬೆಳಗ್ಗೆ 7 ರಿಂದ ರಾತ್ರಿ 8 ಗಂಟೆಯವರೆಗೆ ಉಪವಾಸ ವೃತ ಕೈಗೊಂಡಿದ್ದ ವಿದ್ಯಾರ್ಥಿಗಳಿಗೆ ಸರ್ಕಾರಿ ಶಾಲೆಯ ಶಿಕ್ಷಕ ಥಳಿಸಿದ ಅಮಾನವೀಯ ಘಟನೆ ಛತ್ತೀಸಗಢದ ಕಂಡಗಾಂವ್ ಜಿಲ್ಲೆಯಲ್ಲಿ ವರದಿಯಾಗಿದೆ.
ಚರಣ್ ಮಾರ್ಕಂ ಎಂಬ ಶಿಕ್ಷಕನು ವಿದ್ಯಾರ್ಥಿಗಳಿಗೆ ಥಳಿಸಿದ್ದು ಮಾತ್ರವಲ್ಲ ಹಿಂದೂ ದೇವತೆಗಳ ವಿರುದ್ಧ ಆಕ್ಷೇಪಾರ್ಹ ಟೀಕೆಗಳನ್ನು ಮಾಡಿದ್ದಾರೆ. ಈ ವಿಚಾರ ಬೆಳಕಿಗೆ ಬರುತ್ತಿದ್ದಂತೆಯೇ ಶಿಕ್ಷಕನನ್ನು ಅಮಾನತು ಮಾಡಲಾಗಿದೆ. ಗಿರೋಲಾ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಬಂಡಾಪಾರದಲ್ಲಿರುವ ಸರ್ಕಾರಿ ಶಾಲೆಯಲ್ಲಿ ಈ ಘಟನೆ ಸಂಭವಿಸಿದೆ.
ಶಿಕ್ಷಕನ ವಿರುದ್ಧ ವಿಚಾರಣೆ ಮುಂದುವರಿದಿದೆ ಎಂದು ಕೊಂಡಗಾಂವ್ನ ಕಲೆಕ್ಟರ್ ಪುಷ್ಪೇಂದ್ರ ಕುಮಾರ್ ಮೀನಾ ಹೇಳಿದ್ರು.
7 ಹಾಗೂ 8ನೇ ತರಗತಿ ವಿದ್ಯಾರ್ಥಿಗಳನ್ನು ಮನಬಂದಂತೆ ಥಳಿಸಿದ ಹಿನ್ನೆಲೆಯಲ್ಲಿ ಗ್ರಾಮ ಪಂಚಾಯ್ತಿ ಸದಸ್ಯರು ಹಾಗೂ ಗ್ರಾಮಸ್ಥರು ಶಿಕ್ಷಕನ ವಿರುದ್ಧ ದೂರನ್ನು ನೀಡಿದ್ದರು. ವಿದ್ಯಾರ್ಥಿಗಳಿಗೆ ಥಳಿಸಿದ್ದು ಮಾತ್ರವಲ್ಲದೇ ಶ್ರೀಕೃಷ್ಣನ ವಿರುದ್ಧ ಇಲ್ಲ ಸಲ್ಲದ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿದ್ದರು.
ಶಿಕ್ಷಕ ಚರಣ್ ವಿರುದ್ಧ ಗ್ರಾಮಸ್ಥರು ಆಡಿಯೋ ಹಾಗೂ ವಿಡಿಯೋ ಸಾಕ್ಷ್ಯಗಳನ್ನು ಒದಗಿಸಿದ್ದಾರೆ ಎಂದು ಮೀನಾ ಹೇಳಿದ್ದಾರೆ.
ಗ್ರಾಮಸ್ಥರು ನೀಡಿರುವ ದೂರನ್ನು ಆಧರಿಸಿ ಶಿಕ್ಷಕನ ವಿರುದ್ಧ ಶಿಕ್ಷಣ ಇಲಾಖೆ ತನಿಖೆ ಕೈಗೊಂಡಿದೆ ಮಾತ್ರವಲ್ಲದೇ ಶಿಕ್ಷಕನನ್ನು ಅಮಾನತು ಮಾಡಿದೆ.