ನವದೆಹಲಿ: ಛತ್ತೀಸ್ ಗಢದ ರಾಯ್ ಘರ್‌ನಲ್ಲಿ ನ್ಯಾಯಾಲಯ ಸಮನ್ಸ್ ನೀಡಿದ್ದ ಹಿನ್ನಲೆಯಲ್ಲಿ ಶಿವಲಿಂಗವನ್ನು ಕಿತ್ತು ತಹಸಿಲ್ ಕಚೇರಿಗೆ ತಳ್ಳುವ ಗಾಡಿಯಲ್ಲಿ ಕೊಂಡೊಯ್ಯಲಾಗಿದೆ.
ಸರ್ಕಾರಿ ಭೂಮಿ ಅತಿಕ್ರಮಿಸುವುದರ ವಿರುದ್ಧ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಲಾಗಿದ್ದು, ರಾಯಗಢದ ನಿವಾಸಿಯೊಬ್ಬರು ಸರ್ಕಾರಿ ಜಾಗದಲ್ಲಿ ದೇವಾಲಯವನ್ನು ನಿರ್ಮಿಸಿದ್ದಾರೆ ಎಂದು ಆರೋಪಿಸಲಾಗಿದೆ. ತಹಸಿಲ್ ನ್ಯಾಯಾಲಯವು ಶಿವ ದೇವಾಲಯ ಸೇರಿದಂತೆ ಎಲ್ಲರಿಗೂ ಸಮನ್ಸ್ ಜಾರಿ ಮಾಡಿದೆ.
ನೋಟಿಸ್ ನಲ್ಲಿ ದೇವಸ್ಥಾನದ ಅರ್ಚಕ ಅಥವಾ ಆಡಳಿತಾಧಿಕಾರಿಗೆ ಸಮನ್ಸ್ ನೀಡದೆ ದೇವಸ್ಥಾನವನ್ನೇ ಉಲ್ಲೇಖಿಸಿದ್ದು, ಹಾಜರಾಗದಿದ್ದಲ್ಲಿ 10,000 ರೂಪಾಯಿ ದಂಡ ವಿಧಿಸುವುದಾಗಿ ಎಚ್ಚರಿಕೆ ನೀಡಲಾಗಿದೆ.
ಆದ್ದರಿಂದ, ಸ್ಥಳೀಯರು ಶಿವನನ್ನು ತಹಸಿಲ್ ನ್ಯಾಯಾಲಯಕ್ಕೆ ಹಾಜರುಪಡಿಸಲು ಮುಂದಾಗಿದ್ದಾರೆ. ಅಂತೆಯೇ ಶಿವಲಿಂಗವನ್ನೇ ತೆಗೆದುಕೊಂಡು ಹೋಗಿದ್ದಾರೆ. ಜಾರಿ ಮಾಡಲಾಗಿದ್ದ ನೋಟಿಸ್ ನಲ್ಲಿ ಉಂಟಾದ ಪ್ರಮಾದದಿಂದ ಹೀಗೆ ಮಾಡಲಾಗಿದೆ. ಶಿವಲಿಂಗವನ್ನು ಕೋರ್ಟ್ ಗೆ ತಂದಾಗ ಹೆಚ್ಚಿನ ಸಂಖ್ಯೆಯ ಭಕ್ತರು ಕೂಡ ಬಂದಿದ್ದಾರೆ.
ನ್ಯಾಯಾಲಯದ ಅಧಿಕಾರಿಗಳು ಸಮನ್ಸ್ ಅನ್ನು ಪರಿಶೀಲಿಸಿದ್ದು, ಅದರಲ್ಲಿ ದೋಷವಿರುವುದನ್ನು ಬಹಿರಂಗಪಡಿಸಿದ್ದಾರೆ. ನೋಟಿಸ್ ತಪ್ಪಾಗಿ ದೇವಾಲಯದಲ್ಲಿದ್ದ ದೇವರನ್ನು ಕರೆಯಲಾಗಿದೆ. ಈಗ ವ್ಯಕ್ತಿಯ ಹೆಸರಿನಲ್ಲಿ ಹೊಸದಾಗಿ ಸಮನ್ಸ್ ಕಳುಹಿಸಲಾಗುವುದು. ಹಿಂದಿನ ವಿಚಾರಣೆಯನ್ನು ರದ್ದುಗೊಳಿಸಲಾಗಿದ್ದು, ಏಪ್ರಿಲ್ 13 ರಂದು ಮುಂದಿನ ವಿಚಾರಣೆ ನಡೆಯಲಿದೆ.