ಡ್ರಗ್ ವ್ಯಸನಿಯಾಗಿದ್ದ 24 ವರ್ಷದ ಯುವಕನೊಬ್ಬ ಹಣಕ್ಕಾಗಿ ತನ್ನ ಪೋಷಕರು ಮತ್ತು ಅಜ್ಜಿಯನ್ನು ಕೊಂದು ಮೃತದೇಹವನ್ನು ಸುಟ್ಟುಹಾಕಿರೋ ಘಟನೆ ಛತ್ತೀಸ್ ಗಡದಲ್ಲಿ ವರದಿಯಾಗಿದೆ.
ಮಹಾಸಮುಂದ್ ಜಿಲ್ಲೆಯ ಸಿಂಗ್‌ಪುರ ಪೊಲೀಸ್ ಠಾಣೆ ವ್ಯಾಪ್ತಿಯ ಪುಟ್ಕಾ ಗ್ರಾಮದಲ್ಲಿ ಈ ಘಟನೆ ನಡೆದಿದ್ದು ಆರೋಪಿಯನ್ನ ಬಂಧಿಸಲಾಗಿದೆ.
ಆರೋಪಿಯನ್ನು 24 ವರ್ಷದ ಉದಿತ್ ಭೋಯ್ ಎಂದು ಗುರುತಿಸಲಾಗಿದೆ. ಆರೋಪಿ ಮಾದಕ ವ್ಯಸನಿಯಾಗಿದ್ದು, ತಂದೆ ಹಣ ನೀಡಲು ನಿರಾಕರಿಸಿದ ನಂತರ ಕುಟುಂಬ ಸದಸ್ಯರನ್ನು ಕೊಲೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಯ ತಂದೆ ಪ್ರಭಾತ್ ಭೋಯ್ ತನ್ನ ಪತ್ನಿ, ತಾಯಿ ಮತ್ತು ಮಗನೊಂದಿಗೆ ವಾಸವಾಗಿದ್ದರು. ಉದಿತ್ ತನ್ನ ತಂದೆ-ತಾಯಿ ಮತ್ತು ಅಜ್ಜಿ ಮಲಗಲು ಹೋದಾಗ ಕೊಂದಿದ್ದಾನೆ. ದೊಣ್ಣೆಯಿಂದ ತಂದೆಯ ತಲೆಗೆ ಹೊಡೆದು ನಂತರ ತಾಯಿಯ ಮೇಲೆ ಹಲ್ಲೆ ನಡೆಸಿದ್ದಾನೆ ಎನ್ನಲಾಗಿದೆ. ಗಲಾಟೆಯಿಂದ ಎಚ್ಚರಗೊಂಡ ಅಜ್ಜಿ ಮೇಲೂ ಉದಿತ್ ಹಲ್ಲೆ ನಡೆಸಿದ್ದ. ಅವರ ಶವಗಳನ್ನು ಮನೆಯ ಬಾತ್ ರೂಂನಲ್ಲಿ ಇರಿಸಿದ್ದ. ಮರುದಿನ ಉದಿತ್ ಮನೆಯ ಹಿತ್ತಲಿನಲ್ಲಿ ಮರ ಮತ್ತು ಸ್ಯಾನಿಟೈಸರ್ ಬಳಸಿ ದೇಹಗಳನ್ನು ಸುಟ್ಟುಹಾಕಿದ್ದನು.
ನಂತರ ಉದಿತ್ ಮೇ 12 ರಂದು ಸಿಂಗ್‌ಪುರ ಪೊಲೀಸ್ ಠಾಣೆಯಲ್ಲಿ ಪೋಷಕರು ಕಾಣೆಯಾಗಿದ್ದಾರೆಂದು ದೂರು ಸಲ್ಲಿಸಿದನು.
ಪ್ರಭಾತ್ ಭೋಯ್ ಅವರ ಇನ್ನೊಬ್ಬ ಮಗ ರಾಯ್‌ಪುರದಲ್ಲಿ ಓದುತ್ತಿದ್ದ ಅಮಿತ್, ತನ್ನ ಹೆತ್ತವರು ಮತ್ತು ಅಜ್ಜಿ ನಾಪತ್ತೆಯಾದ ಬಗ್ಗೆ ತಿಳಿದಾಗ ಅನುಮಾನಗೊಂಡಿದ್ದ.
ಪುಟ್ಕಾದಲ್ಲಿರುವ ಅವರ ನಿವಾಸಕ್ಕೆ ಬಂದಾಗ ಹಿತ್ತಲಿನಲ್ಲಿ ರಕ್ತದ ಕಲೆಗಳು, ಬೆಂಕಿ ಹಚ್ಚಿದ್ದ ಚಿಹ್ನೆಗಳು ಮತ್ತು ಮಾನವ ಮೂಳೆಗಳು ಕಂಡುಬಂದಿದ್ದವು. ಪರಿಸ್ಥಿತಿಯಿಂದ ಆತಂಕಗೊಂಡ ಅಮಿತ್ ತಕ್ಷಣ ಸಿಂಗ್‌ಪುರ ಪೊಲೀಸ್ ಠಾಣೆಗೆ ತೆರಳಿ ಘಟನೆಯ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದ.
ಏತನ್ಮಧ್ಯೆ ಉದಿತ್ ತನ್ನ ತಂದೆಯ ಮೊಬೈಲ್ ಫೋನ್‌ನಿಂದ ತನ್ನ ಸಂಬಂಧಿಕರಿಗೆ ಸಂದೇಶ ಕಳುಹಿಸಿ ತಂದೆ ಪ್ರಭಾತ್ ಭೋಯ್ ಸುರಕ್ಷಿತವಾಗಿದ್ದಾರೆ ಎಂದು ಸೂಚಿಸುವ ಮೂಲಕ ಅವರ ನಾಪತ್ತೆಗೆ ಅಮಿತ್ ಕಾರಣ ಎಂದು ಆರೋಪಿಸಿದ್ದ.
ಆಗ ಪೊಲೀಸರು ಮೊಬೈಲ್ ಫೋನ್ ಸ್ಥಳವನ್ನು ಪತ್ತೆಹಚ್ಚಿ ಆರೋಪಿಯನ್ನು ಬಂಧಿಸಿದರು. ಆರಂಭದಲ್ಲಿ ಪೊಲೀಸರಿಗೆ ಅಸ್ಪಷ್ಟ ಉತ್ತರ ನೀಡಿ ದಾರಿತಪ್ಪಿಸಲು ಯತ್ನಿಸಿದ ಆತ ಬಳಿಕ ತಪ್ಪೊಪ್ಪಿಕೊಂಡಿದ್ದಾನೆ.