ರಾಯಪುರ: ಛತ್ತೀಸ್‌ಗಢದ ಬಿಜಾಪುರ ಜಿಲ್ಲೆಯಲ್ಲಿ ಪತ್ರಕರ್ತ ಮುಕೇಶ್ ಚಂದ್ರಕರ್ ಅವರ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಸುರೇಶ್ ಚಂದ್ರಕರ್ ಎಂಬಾತನನ್ನು ವಿಶೇಷ ತನಿಖಾ ತಂಡವು ಹೈದರಾಬಾದ್ ನಲ್ಲಿ ಬಂಧಿಸಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಸೋಮವಾರ ತಿಳಿಸಿದ್ದಾರೆ.
ಗುತ್ತಿಗೆದಾರನಾಗಿರುವ ಆರೋಪಿ ಸುರೇಶ್ ಚಂದ್ರಕರ್, ಜನವರಿ 3 ರಂದು ಪತ್ರಕರ್ತ ಮುಕೇಶ್ ಚಂದ್ರಕರ್ ಅವರ ಹತ್ಯೆ ಬೆಳಕಿಗೆ ಬಂದಾಗಿನಿಂದ ತಲೆಮರೆಸಿಕೊಂಡಿದ್ದ.
ಈ ಪ್ರಕರಣದ ತನಿಖೆ ನಡೆಸಲು ರಚಿಸಲಾದ ವಿಶೇಷ ತನಿಖಾ ತಂಡವು ಭಾನುವಾರ ರಾತ್ರಿ ಹೈದರಾಬಾದ್ ನಲ್ಲಿ ಸುರೇಶ್ ಚಂದ್ರಕರ್ ಅವರನ್ನು ಬಂಧಿಸಿದೆ ಎಂದು ಅಧಿಕಾರಿ ಹೇಳಿದ್ದಾರೆ.
ಈ ಪ್ರಕರಣದಲ್ಲಿ ಅವನ ಸಹೋದರರಾದ ರೀತೇಶ್ ಚಂದ್ರಕರ್ ಮತ್ತು ದಿನೇಶ್ ಚಂದ್ರಕರ್ ಹಾಗೂ ಸೂಪರ್‌ವೈಸರ್ ಮಹೇಂದ್ರ ರಾಮ್ಟೇಕೆ ಅವರನ್ನು ಈಗಾಗಲೇ ಬಂಧಿಸಲಾಗಿದೆ.
ಫ್ರೀಲಾನ್ಸ್ ಪತ್ರಕರ್ತ ಮುಕೇಶ್ ಚಂದ್ರಕರ್ (33) ಜನವರಿ 1 ರಂದು ನಾಪತ್ತೆಯಾಗಿದ್ದರು. ಬಿಜಾಪುರ ಪಟ್ಟಣದ ಚಟ್ಟನ್‌ಪಾರ ಬಸ್ತಿಯಲ್ಲಿ ಸುರೇಶ್ ಚಂದ್ರಕರ್ ಅವರ ಆಸ್ತಿಯಲ್ಲಿರುವ ಸೆಪ್ಟಿಕ್ ಟ್ಯಾಂಕ್‌ನಲ್ಲಿ ಜನವರಿ 3 ರಂದು ಅವರ ಮೃತದೇಹ ಪತ್ತೆಯಾಗಿತ್ತು.
ಬಿಜಾಪುರದ ರಸ್ತೆ ನಿರ್ಮಾಣ ಕಾಮಗಾರಿಯಲ್ಲಿ ಅಕ್ರಮ ಎಸಗಲಾಗಿದೆ ಎಂದು ಡಿಸೆಂಬರ್ 25 ರಂದು ಎನ್‌ಡಿ ಟಿವಿಯಲ್ಲಿ ಪ್ರಸಾರವಾದ ವರದಿ ಕಾರಣಕ್ಕೆ ಮುಕೇಶ್ ಚಂದ್ರಕರ್ ಅವರ ಹತ್ಯೆ ನಡೆದಿರಬಹುದು ಎಂದು ಹೇಳಲಾಗಿತ್ತು. ಈ ನಿರ್ಮಾಣ ಕೆಲಸವನ್ನು ಗುತ್ತಿಗೆದಾರ ಸುರೇಶ್ ಚಂದ್ರಕರ್ ನಿರ್ವಹಿಸುತ್ತಿದ್ದರು.
ಛತ್ತೀಸ್‌ಗಢದ ಉಪ ಮುಖ್ಯಮಂತ್ರಿ ವಿಜಯ್ ಶರ್ಮಾ, ಸುರೇಶ್ ಚಂದ್ರಕರ್ ಕಾಂಗ್ರೆಸ್ ನಾಯಕ ಎಂದು ಆರೋಪಿಸಿದ್ದರು. ಆದರೆ ಕಾಂಗ್ರೆಸ್ ನಾಯಕರು, ಆರೋಪಿ ಇತ್ತೀಚೆಗಷ್ಟೇ ಬಿಜೆಪಿಗೆ ಸೇರ್ಪಡೆಯಾಗಿದ್ದ ಎಂದು ಹೇಳಿದ್ದರು. ವಿಶೇಷ ತನಿಖಾ ತಂಡ ಈ ಪ್ರಕರಣದ ಬಗ್ಗೆ ಮತ್ತಷ್ಟು ತನಿಖೆ ನಡೆಸುತ್ತಿದೆ.