ಕೋರ್ಬಾ: ಛತ್ತಿಸ್ ಗಢದ ಕೋರ್ಬಾ ಜಿಲ್ಲೆಯಲ್ಲಿ ದುಷ್ಕರ್ಮಿಗಳು ಪೈಶಾಚಿಕ ಕೃತ್ಯ ಎಸಗಿದ್ದಾರೆ. 16 ವರ್ಷದ ಹುಡುಗಿ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ ಕಲ್ಲಿನಿಂದ ಹೊಡೆದು ಸಾಯಿಸಿದ್ದಾರೆ. ಆಕೆಯ ಜೊತೆಗಿದ್ದ ತಂದೆ ಮತ್ತು ನಾಲ್ಕು ವರ್ಷದ ಬಾಲಕಿಯನ್ನು ಹತ್ಯೆಮಾಡಿದ್ದಾರೆ.
ಲೆಮ್ರು ಪೊಲೀಸ್ ಠಾಣೆ ವ್ಯಾಪ್ತಿಯ ಗಧುಪ್ರೋದಾ ಗ್ರಾಮದ ಬಳಿ ಜನವರಿ 29 ರಂದು ಘಟನೆ ನಡೆದಿದ್ದು ಮಂಗಳವಾರ ಬೆಳಕಿಗೆ ಬಂದಿದೆ. ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸರು ಆರು ಮಂದಿಯನ್ನು ಬಂಧಿಸಿದ್ದಾರೆ.
ಆರೋಪಿಗಳನ್ನು ಸಂತ್ರಮ್ ಮಜ್ವಾರ್(45), ಅಬ್ದುಲ್ ಜಬ್ಬರ್(29), ಅನಿಲ್ ಕುಮಾರ್ ಸರ್ತಿ(20), ಪರದೇಶಿ ರಾಮ್ ಪಾಣಿಕಾ(35), ಆನಂದ್ ರಾಮ್ ಪನಿಕಾ(25) ಮತ್ತು ಉಮಾಶಂಕರ್ ಯಾದವ್(21) ಎಂದು ಗುರುತಿಸಲಾಗಿದೆ.
ಚಾರ್ಪಾನಿ ನಿವಾಸಿಯಾಗಿರುವ ಮೃತವ್ಯಕ್ತಿ ಪ್ರಕರಣದ ಪ್ರಮುಖ ಆರೋಪಿಯಾಗಿರುವ ಸಂತ್ರಮ್ ಮನೆಯಲ್ಲಿ ದನ ಮೇಯಿಸಿಕೊಂಡಿದ್ದ. ಜನವರಿ 29 ರಂದು ಆತನ ಮಗಳು ಮತ್ತು ಮೊಮ್ಮಗಳನ್ನು ಊರಿಗೆ ಬಿಟ್ಟು ಬರುಲು ಹೋಗುತ್ತಿದ್ದಾಗ ಅಡ್ಡಗಟ್ಟಿದ ದುಷ್ಕರ್ಮಿಗಳು ಸಮೀಪದ ದಟ್ಟ ಕಾಡಿನ ಮಧ್ಯೆ ಸುತ್ತುವರೆದ ಬೆಟ್ಟಕ್ಕೆ ಕರೆದೊಯ್ದು ಹರೆಯದ ಹುಡುಗಿ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ. ಬಳಿಕ ಕಲ್ಲಿನಿಂದ ಹೊಡೆದು ಮೂವರನ್ನು ಹತ್ಯೆ ಮಾಡಿ ಪರಾರಿಯಾಗಿದ್ದಾರೆ.
ಮೃತರ ಪುತ್ರ ತನ್ನ ತಂದೆ, ಸಹೋದರಿ ಸೇರಿ ಮೂವರು ನಾಪತ್ತೆಯಾದ ಬಗ್ಗೆ ದೂರು ನೀಡಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಆರೋಪಿಗಳನ್ನು ಘಟನೆ ನಡೆದ ದಟ್ಟ ಕಾಡಿನ ಸ್ಥಳಕ್ಕೆ ಕರೆದೊಯ್ದಾಗ ವ್ಯಕ್ತಿ, ಮೊಮ್ಮಗಳು ಮೃತಪಟ್ಟಿದ್ದು, ಅತ್ಯಾಚಾರಕ್ಕೊಳಗಾದ ಹುಡುಗಿಗೆ ಬದುಕಿರುವುದು ಕಂಡು ಬಂದಿದೆ. ಆದರೆ, ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯದಲ್ಲೇ ಆಕೆಯೂ ಮೃತಪಟ್ಟಿದ್ದಾಳೆ.ಮೃತರು ಮಹಡಿ ಕೋರ್ವಾ ಬುಡಕಟ್ಟು ಸಮುದಾಯಕ್ಕೆ ಸೇರಿದವರಾಗಿದ್ದಾರೆ.
ಐಪಿಸಿ ಸೆಕ್ಷನ್‌ಗಳು 302 (ಕೊಲೆ), 376 (2) ಜಿ (ಗ್ಯಾಂಗ್ರೇಪ್) ಮತ್ತು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ (ದೌರ್ಜನ್ಯ ತಡೆ) ಕಾಯ್ದೆ ಮತ್ತು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆಯಡಿ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.