ರಸ್ತೆಯಲ್ಲಿ ಸಿಕ್ಕ 45 ಲಕ್ಷ ರೂಪಾಯಿಗಳನ್ನು ಹಿಂದಿರುಗಿಸುವ ಮೂಲಕ ಪೊಲೀಸ್ ಪೇದೆಯೊಬ್ಬರು ಪ್ರಾಮಾಣಿಕತೆ ಮೆರೆದಿರುವ ಘಟನೆ ಚತ್ತೀಸ್ಗಡದ ರಾಯಪುರದಲ್ಲಿ ನಡೆದಿದೆ.
ನವ ರಾಯ್ಪುರ್ ನ ಕಯಬಂಧಾ ಪೊಲೀಸ್ ಠಾಣೆಯಲ್ಲಿ ಟ್ರಾಫಿಕ್ ಪೇದೆಯಾಗಿ ಕಾರ್ಯ ನಿರ್ವಹಿಸುತ್ತಿರುವ ನೀಲಾಂಬರ್ ಸಿನ್ಹಾ ಪ್ರಾಮಾಣಿಕತೆ ಮೆರೆದ ಪೊಲೀಸ್ ಸಿಬ್ಬಂದಿಯಾಗಿದ್ದಾರೆ.
ಇವರು ಶನಿವಾರ ಬೆಳಗ್ಗೆ ರಸ್ತೆಯಲ್ಲಿ ನಡೆದು ಹೋಗುತ್ತಿದ್ದ ವೇಳೆ ಬ್ಯಾಗ್ ಒಂದು ಕಣ್ಣಿಗೆ ಬಿದ್ದಿದೆ. ಅದನ್ನು ಪರಿಶೀಲಿಸಿದಾಗ 2000 ಹಾಗೂ 500 ಮೌಲ್ಯದ ನೋಟುಗಳಿದ್ದ ಬರೋಬ್ಬರಿ 45 ಲಕ್ಷ ರೂಪಾಯಿ ಪತ್ತೆಯಾಗಿದೆ.
ಕೂಡಲೇ ಅವರು ಅದನ್ನು ಸಮೀಪದ ಮಾನಾ ಪೊಲೀಸ್ ಠಾಣೆ ಅಧಿಕಾರಿಗಳಿಗೆ ಒಪ್ಪಿಸಿದ್ದು, ಹಿರಿಯ ಅಧಿಕಾರಿಗಳು ನೀಲಾಂಬರ್ ಸಿನ್ಹಾ ಅವರ ಪ್ರಾಮಾಣಿಕತೆಯನ್ನು ಕೊಂಡಾಡಿದ್ದಾರೆ. ಇದೀಗ ಪೊಲೀಸರು 45 ಲಕ್ಷ ರೂಪಾಯಿಗಳನ್ನು ಕಳೆದುಕೊಂಡಿರುವ ವಾರಸುದಾರರಿಗಾಗಿ ಹುಡುಕಾಟ ನಡೆಸಿದ್ದಾರೆ.