ಛತ್ತೀಸ್‌ಗಢದ ಜಶ್‌ಪುರದಲ್ಲಿ ಭಾನುವಾರ ನಡೆದ ಕಾರ್ಯಕರ್ತರ ಸಮಾವೇಶದಲ್ಲಿ ಕಾಂಗ್ರೆಸ್ ಪಕ್ಷದ ಮಾಜಿ ಜಿಲ್ಲಾಧ್ಯಕ್ಷ ಪವನ್ ಅಗರ್‌ವಾಲ್ ಅವರನ್ನು ವೇದಿಕೆಯಿಂದ ದೂರ ತಳ್ಳಿದ ಘಟನೆ ನಡೆದ ನಂತರ ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರು ವಾಗ್ವಾದ ನಡೆಸಿದ್ದಾರೆ.
ಪವನ್ ಅಗರವಾಲ್ ಅವರು, ರಾಜ್ಯದ ಆರೋಗ್ಯ ಸಚಿವ ಟಿ.ಎಸ್. ಸಿಂಗ್ ದೇವ್ ಬಗ್ಗೆ ಮಾತನಾಡಲು ಆರಂಭಿಸಿದಾಗ, ಕಾಂಗ್ರೆಸ್ ಅಲ್ಪಸಂಖ್ಯಾತ ಕೋಶದ ಜಿಲ್ಲಾ ಅಧ್ಯಕ್ಷ ಇಫ್ತಿಕಾರ್ ಹಸನ್ ವೇದಿಕೆಯ ಮೇಲೆ ಹತ್ತಿ, ಅವರಿಂದ ಮೈಕ್ ಕಸಿದುಕೊಂಡು ಅವರನ್ನು ದೂರ ತಳ್ಳಿದ್ದಾರೆ. ಇದರ ಬೆನ್ನಲ್ಲೇ ಹತ್ತಾರು ಕಾರ್ಯಕರ್ತರು ಮತ್ತು ಮುಖಂಡರು ವೇದಿಕೆಯ ಮೇಲೆ ಹತ್ತಿ ಜಗಳವಾಡಿಕೊಂಡಿದ್ದಾರೆ.
ಪವನ್ ಅಗರ್ವಾಲ್ ಅವರು, ರಾಜ್ಯದಲ್ಲಿ ಕಾಂಗ್ರೆಸ್ ಅನ್ನು ಮರಳಿ ಅಧಿಕಾರಕ್ಕೆ ತರಲು ಟಿ.ಎಸ್. ಸಿಂಗ್ ದೇವ್ ಮತ್ತು ಮುಖ್ಯಮಂತ್ರಿ ಭೂಪೇಶ್ ಬಾಘೇಲ್ ಒಟ್ಟಾಗಿ ಕೆಲಸ ಮಾಡಿದ್ದಾರೆ. ಈಗ ಬಘೇಲ್ ಅವರು ತಮ್ಮ ಸ್ಥಾನವನ್ನು ದೇವ್ ಗೆ ಬಿಟ್ಟುಕೊಡಬೇಕೆಂದು ಹೇಳಿದ್ದಾರೆ.
ಟಿ.ಎಸ್. ಸಿಂಗ್ ದೇವ್ ಅವರು 2.5 ವರ್ಷಗಳ ಕಾಲ(ಮುಖ್ಯಮಂತ್ರಿಯಾಗಲು) ಕಾಯುತ್ತಿದ್ದಾರೆ. ಈಗ ಭೂಪೇಶ್ ಬಾಘೇಲ್ ಅವರ ಸ್ಥಾನವನ್ನು ಖಾಲಿ ಮಾಡಬೇಕು. ಇಲ್ಲಿ ಕಾಂಗ್ರೆಸ್ ಸರ್ಕಾರವಿಲ್ಲದಿದ್ದಾಗ ದೇವ್ ಮತ್ತು ಬಘೇಲ್ ಒಟ್ಟಿಗೆ ಕೆಲಸ ಮಾಡಿದ್ದಾರೆ. ಅವರಿಂದಲೇ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿದೆ. ನಾನು ಯಾವಾಗ ಇದನ್ನು ಹೇಳುತ್ತಿದ್ದನೋ ಆಗ ಕುಂಕುರಿ ಶಾಸಕರು ನನ್ನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
ಛತ್ತೀಸ್‌ಗಢದಲ್ಲಿ ಆಡಳಿತಾರೂಢ ಕಾಂಗ್ರೆಸ್‌ನಲ್ಲಿ ಉದ್ವಿಗ್ನತೆ ಉಂಟಾಗುತ್ತಿದೆ, ಟಿ.ಎಸ್. ಸಿಂಗ್ ದೇವ್ ಅವರು ಬದಲಾವಣೆ ಕೋರಿದ್ದು, ಬಾಘೆಲ್ ಅವರನ್ನು ಕೆಳಗಿಳಿಸಿ ತಮಗೆ ಸಿಎಂ ಸ್ಥಾನ ನೀಡಬೇಕೆಂದು ಬೇಡಿಕೆ ಇಟ್ಟಿದ್ದಾರೆ. ಕಾಂಗ್ರೆಸ್ ಸರ್ಕಾರ ಎರಡೂವರೆ ವರ್ಷಗಳನ್ನು ಪೂರ್ಣಗೊಳಿಸಿದ ನಂತರ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಳ್ಳುವ ಒಪ್ಪಂದವನ್ನು ಉಲ್ಲೇಖಿಸಿದ್ದಾರೆ.
ಕಳೆದ ತಿಂಗಳು, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ದೆಹಲಿಯಲ್ಲಿ ಭೂಪೇಶ್ ಬಾಘೇಲ್ ಮತ್ತು ಸಿಂಗ್ ದೇವ್ ಅವರೊಂದಿಗೆ ಪ್ರತ್ಯೇಕ ಸಭೆಗಳನ್ನು ನಡೆಸಿ ಸಮಸ್ಯೆಯನ್ನು ಪರಿಹರಿಸಲು ಪ್ರಯತ್ನಿಸಿದ್ದರು.
ಇದೇ ವೇಳೆ ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ರವಿಶರ್ಮಾ ಮಾತನಾಡಿ, ಕಾಂಗ್ರೆಸ್ ದೊಡ್ಡ ಕುಟುಂಬವಾಗಿದ್ದು, ಇಂತಹ ಸಣ್ಣಪುಟ್ಟ ಕೆಲಸಗಳು ನಡೆಯುತ್ತಲೇ ಇರುತ್ತವೆ. ಈ ಘಟನೆಯಲ್ಲಿ ಅಶಿಸ್ತು ಇದ್ದರೆ, ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.
ವೇದಿಕೆಯಲ್ಲಿ ಪವನ್ ಅಗರ್ವಾಲ್ ಭಾಷಣ ಮಾಡುತ್ತಿದ್ದಾಗ ಅವರ ಕೈಯಿಂದ ಯಾರೋ ಮೈಕ್ ಕಿತ್ತುಕೊಂಡರು ಎಂದು ರವಿ ಶರ್ಮಾ ಹೇಳಿದ್ದು, ಇದರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.