ಛತ್ತೀಸ್‌ಗಢದ ದುರ್ಗ್ ಜಿಲ್ಲೆಯಲ್ಲಿ ಮಂಗಳವಾರ ರಾತ್ರಿ ಬಸ್ ‘ಮುರುಮ್’ ಮಣ್ಣಿನ ಗಣಿ ಹೊಂಡಕ್ಕೆ ಬಿದ್ದು, ಕನಿಷ್ಠ 11 ಜನ ಸಾವನ್ನಪ್ಪಿದ್ದಾರೆ. ಸುಮಾರು 20 ಜನರು ಗಾಯಗೊಂಡಿದ್ದಾರೆ.
ಬಸ್ ನಲ್ಲಿದ್ದವರೆಲ್ಲರೂ ಖಾಸಗಿ ಸಂಸ್ಥೆಯ ಉದ್ಯೋಗಿಗಳು ಎಂದು ಪೊಲೀಸರು ತಿಳಿಸಿದ್ದಾರೆ. ಕುಮ್ಹಾರಿ ಪೊಲೀಸ್ ಠಾಣಾ ವ್ಯಾಪ್ತಿಯ ಖಾಪ್ರಿ ಗ್ರಾಮದ ಬಳಿ ರಾತ್ರಿ 8:30 ರ ಸುಮಾರಿಗೆ ಡಿಸ್ಟಿಲರಿ ಕಂಪನಿಯ ಎಲ್ಲಾ ಉದ್ಯೋಗಿಗಳು ಕೆಲಸ ಮುಗಿಸಿ ಮನೆಗೆ ಮರಳುತ್ತಿದ್ದಾಗ ಅಪಘಾತ ಸಂಭವಿಸಿದೆ ಎಂದು ನಗರ ಪೊಲೀಸ್ ವರಿಷ್ಠಾಧಿಕಾರಿ(ಚಾವ್ನಿ ಪ್ರದೇಶ) ಹರೀಶ್ ಪಾಟೀಲ್ ತಿಳಿಸಿದ್ದಾರೆ.
ಪ್ರಾಥಮಿಕ ಮಾಹಿತಿಯ ಪ್ರಕಾರ, ಬಸ್‌ನಲ್ಲಿ 30 ಕ್ಕೂ ಹೆಚ್ಚು ಜನರಿದ್ದರು, ಅದು ರಸ್ತೆಯಿಂದ ಸ್ಕಿಡ್ ಆಗಿ 40 ಅಡಿ ಆಳದ ‘ಮುರುಮ್’ ಗಣಿಯಲ್ಲಿ ಬಿದ್ದಿದೆ. ಮುರುಮ್ ಒಂದು ರೀತಿಯ ಮಣ್ಣು. ಇದನ್ನು ಹೆಚ್ಚಾಗಿ ನಿರ್ಮಾಣಕ್ಕಾಗಿ ಬಳಸಲಾಗುತ್ತದೆ. ಪೊಲೀಸ್ ತಂಡ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ಆರಂಭಿಸಿತು. ಗಾಯಗೊಂಡವರನ್ನು ಸಮೀಪದ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ತಿಳಿಸಿದ್ದಾರೆ.
ಮುಖ್ಯಮಂತ್ರಿ ವಿಷ್ಣು ದೇವ್ ಸಾಯಿ ಅವರು ಅಪಘಾತದ ಬಗ್ಗೆ ಸಂತಾಪ ವ್ಯಕ್ತಪಡಿಸಿದ್ದಾರೆ ಮತ್ತು ಗಾಯಾಳುಗಳ ಚಿಕಿತ್ಸೆಗೆ ಸಾಕಷ್ಟು ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದ್ದಾರೆ.