ಮಹಾರಾಷ್ಟ್ರದ ಸಿಂಧುದುರ್ಗ ಜಿಲ್ಲೆಯ ಕೋಟೆಯಲ್ಲಿ ಕಳೆದ ವರ್ಷ ಪ್ರಧಾನಿ ನರೇಂದ್ರ ಮೋದಿ ಅವರು ಅನಾವರಣಗೊಳಿಸಿದ್ದ ಮರಾಠ ಸಾಮ್ರಾಜ್ಯದ ಸಂಸ್ಥಾಪಕ ಛತ್ರಪತಿ ಶಿವಾಜಿ ಮಹಾರಾಜರ 35 ಅಡಿ ಪ್ರತಿಮೆ ಸೋಮವಾರ ಕುಸಿದು ಬಿದ್ದಿದೆ. ಬಲವಾದ ಗಾಳಿಯಿಂದಾಗಿ ಪ್ರತಿಮೆ ಕುಸಿದಿದೆ ಎಂದು ಮುಖ್ಯಮಂತ್ರಿ ಏಕನಾಥ್ ಶಿಂಧೆ ಹೇಳಿದ್ದಾರೆ.
ಸಿಂಧುದುರ್ಗದ ರಾಜ್‌ಕೋಟ್ ಕೋಟೆಯಲ್ಲಿ ಪ್ರತಿಮೆಯನ್ನು ಸ್ಥಾಪಿಸಲಾಗಿದ್ದು, ಕಳೆದ ಎರಡು ಮೂರು ದಿನಗಳಿಂದ ಭಾರೀ ಮಳೆ ಮತ್ತು ಗಾಳಿ ಬೀಸುತ್ತಿದೆ.
ಕಳೆದ ವರ್ಷ ಡಿಸೆಂಬರ್ 4 ರಂದು ನೌಕಾಪಡೆಯ ದಿನದಂದು ಮಾಲ್ವಾನ್‌ನ ರಾಜ್‌ಕೋಟ್ ಕೋಟೆಯಲ್ಲಿ ನಡೆದ ಸಂಭ್ರಮಾಚರಣೆಯಲ್ಲಿ ಅವರು ಭಾಗವಹಿಸಿದ್ದ ಪ್ರಧಾನಿ ಮೋದಿ ಅವರು ಪ್ರತಿಮೆಯನ್ನು ಅನಾವರಣಗೊಳಿಸಿದ್ದರು. ಇಂದು ಮಧ್ಯಾಹ್ನ 1 ಗಂಟೆಗೆ ಪ್ರತಿಮೆ ಕುಸಿದು ಬಿದ್ದಿದೆ. ಪೊಲೀಸ್ ಮತ್ತು ಜಿಲ್ಲಾಡಳಿತದ ಹಿರಿಯ ಅಧಿಕಾರಿಗಳು ಪರಿಸ್ಥಿತಿಯನ್ನು ಅವಲೋಕಿಸಿದ್ದಾರೆ. ಹಾನಿಯನ್ನು ಪರಿಶೀಲಿಸಲಾಗಿದೆ.
ಘಟನೆಯ ಕುರಿತು ಪ್ರತಿಕ್ರಿಯಿಸಿದ ಶಿಂಧೆ, ನಾವು ಶಿವಾಜಿ ಮಹಾರಾಜರನ್ನು ದೇವರಂತೆ ಪೂಜಿಸುತ್ತೇವೆ. ಬಲವಾದ ಗಾಳಿಯಿಂದ ಪ್ರತಿಮೆ ಕುಸಿದಿದೆ. ಇದು ದುರದೃಷ್ಟಕರವಾಗಿದೆ. ನಮ್ಮ ಸಚಿವರು ಅಲ್ಲಿಗೆ ಹೋಗಿ ಪರಿಶೀಲಿಸಿದ್ದಾರೆ.
ಘಟನೆಯ ನಂತರ ವಿರೋಧ ಪಕ್ಷಗಳು ಮಹಾರಾಷ್ಟ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿ, ಕಳಪೆ ಗುಣಮಟ್ಟದ ಕಾಮಗಾರಿ ಎಂದು ಆರೋಪಿಸಿವೆ.
ಶಿವಸೇನಾ(ಯುಬಿಟಿ) ಶಾಸಕ ವೈಭವ್ ನಾಯ್ಕ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಕಳಪೆ ಕಾಮಗಾರಿಯಿಂದ ಪ್ರತಿಮೆ ಕುಸಿದಿದೆ ಎಂದು ಆರೋಪಿಸಿದ್ದಾರೆ.
ರಾಜ್ಯ ಸರ್ಕಾರವು ಜವಾಬ್ದಾರಿಯಿಂದ ನುಣುಚಿಕೊಳ್ಳಲು ಪ್ರಯತ್ನಿಸಬಹುದು. ಪ್ರತಿಮೆಯ ನಿರ್ಮಾಣ ಮತ್ತು ಸ್ಥಾಪನೆಗೆ ಕಾರಣರಾದ ವ್ಯಕ್ತಿಗಳನ್ನು ಕೂಲಂಕಷವಾಗಿ ತನಿಖೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.