ಲವಂಗವು ಅತ್ಯಂತ ಪರಿಮಳಯುಕ್ತವಾದ, ತುಂಬಾ ರುಚಿಕರ ಮಸಾಲೆ ಪದಾರ್ಥಗಳಲ್ಲೊಂದು. ಇದು ಆಯುರ್ವೇದದ ನಿಧಿಯಾಗಿದೆ. ಅನೇಕ ಔಷಧೀಯ ಗುಣಗಳು ಲವಂಗದಲ್ಲಿವೆ. ಅಷ್ಟೇ ಅಲ್ಲ ಪೋಷಕಾಂಶಗಳು ಕೂಡ ಸಾಕಷ್ಟಿವೆ. ಲವಂಗವನ್ನು ಸೇವಿಸಿದರೆ ದೇಹಕ್ಕೆ ಬಹಳಷ್ಟು ವಿಟಮಿನ್‌ಗಳು, ಫೈಬರ್, ಪ್ರೋಟೀನ್, ಕಬ್ಬಿಣ, ಕ್ಯಾಲ್ಸಿಯಂ, ಪೊಟ್ಯಾಸಿಯಮ್, ರಂಜಕ, ಮ್ಯಾಂಗನೀಸ್, ಕಾರ್ಬೋಹೈಡ್ರೇಟ್‌ಗಳು ಮತ್ತು ಉತ್ಕರ್ಷಣ ನಿರೋಧಕಗಳು ದೊರೆಯುತ್ತವೆ. ಪ್ರತಿದಿನ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಲವಂಗವನ್ನು ಜಗಿದರೆ ಅಪಾರವಾದ ಆರೋಗ್ಯ ಪ್ರಯೋಜನಗಳಿವೆ. ಅವು ಯಾವುವು ಅನ್ನೋದನ್ನು ನೋಡೋಣ.
ರೋಗನಿರೋಧಕ ಶಕ್ತಿ ಹೆಚ್ಚುತ್ತದೆ
ಕೊರೊನಾ ವೈರಸ್ ಸಾಂಕ್ರಾಮಿಕದ ನಂತರ ಅಂತಹ ಸೋಂಕನ್ನು ತಪ್ಪಿಸಲು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಒತ್ತು ನೀಡಲಾಗುತ್ತಿದೆ. ಬದಲಾಗುತ್ತಿರುವ ಹವಾಮಾನ, ಮಳೆ ಮತ್ತು ಚಳಿಗಾಲದಲ್ಲಿ ಶೀತ, ಕೆಮ್ಮು, ಜ್ವರದ ಅಪಾಯವು ಗಮನಾರ್ಹವಾಗಿ ಹೆಚ್ಚಾಗುತ್ತದೆ. ಪ್ರತಿದಿನ ಬೆಳಗ್ಗೆ ಎದ್ದ ತಕ್ಷಣ ಲವಂಗವನ್ನು ಜಗಿಯುವ ಅಭ್ಯಾಸ ಮಾಡಿಕೊಂಡರೆ ದೇಹದ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ.
ಯಕೃತ್ತಿನ ರಕ್ಷಣೆ
ಯಕೃತ್ತು ನಮ್ಮ ದೇಹದ ಒಂದು ಪ್ರಮುಖ ಅಂಗ. ಇದು ಅನೇಕ ಕಾರ್ಯಗಳನ್ನು ನಿರ್ವಹಿಸುತ್ತದೆ. ಆದ್ದರಿಂದ ಯಕೃತ್ತಿನ ಆರೋಗ್ಯದ ಬಗ್ಗೆಯೂ ಗಮನಹರಿಸಬೇಕು. ಲವಂಗವನ್ನು ತಿನ್ನುವುದರಿಂದ ಯಕೃತ್ತಿನ ಆರೋಗ್ಯವನ್ನು ಸುಧಾರಿಸಬಹುದು.
ಬಾಯಿಯ ದುರ್ವಾಸನೆಗೆ ಮದ್ದು
ಲವಂಗವನ್ನು ನೈಸರ್ಗಿಕ ಮೌತ್ ಫ್ರೆಶ್ನರ್ ಆಗಿ ಬಳಸಬಹುದು. ಅನೇಕ ಬಾರಿ ಬಾಯಿಯಿಂದ ದುರ್ವಾಸನೆ ಪ್ರಾರಂಭವಾಗುತ್ತದೆ. ಇದರಿಂದಾಗಿ ನಾವು ಮಾತನಾಡಲು ಮುಜುಗರಪಟ್ಟುಕೊಳ್ಳುತ್ತೇವೆ. ಲವಂಗದಲ್ಲಿ ಬ್ಯಾಕ್ಟೀರಿಯಾ ವಿರೋಧಿ ಗುಣಗಳಿದ್ದು, ಇದನ್ನು ಪ್ರತಿದಿನ ಬೆಳಗ್ಗೆ ಜಗಿದು ತಿಂದರೆ ಬಾಯಿಯ ಸೂಕ್ಷ್ಮಾಣುಗಳು ಸಾಯುತ್ತವೆ ಮತ್ತು ನಿಮ್ಮ ಉಸಿರು ತಾಜಾತನವನ್ನು ಪಡೆಯುತ್ತದೆ.
ಹಲ್ಲುನೋವಿಗೆ ಪರಿಹಾರ
ಹಠಾತ್ತಾಗಿ ಹಲ್ಲುನೋವು ಕಾಣಿಸಿಕೊಂಡರೆ ಮತ್ತು ನೋವು ನಿವಾರಕ ಔಷಧಿಗಳನ್ನು ತೆಗೆದುಕೊಳ್ಳಲು ನೀವು ಬಯಸದಿದ್ದರೆ, ಲವಂಗವನ್ನು ಬಳಸಿ. ನೋವು ಇರುವ ಹಲ್ಲಿನ ಬಳಿ ಲವಂಗದ ತುಂಡನ್ನು ಒತ್ತಿರಿ. ಲವಂಗ ಬ್ಯಾಕ್ಟೀರಿಯಾದ ವಿರುದ್ಧ ಪರಿಣಾಮಕಾರಿಯಾಗಿ ದಾಳಿ ಮಾಡುತ್ತದೆ, ಇದರಿಂದಾಗಿ ಹಲ್ಲುನೋವು ಗುಣವಾಗುತ್ತದೆ.