ಚೆನ್ನೈ: ಆನ್‌ಲೈನ್ ಗೇಮಿಂಗ್ ಪ್ಲಾಟ್‌ಫಾರ್ಮ್‌ನಲ್ಲಿ ಹಣ ಕಳೆದುಕೊಂಡಿದ್ದಕ್ಕಾಗಿ ಮನನೊಂದು 29 ವರ್ಷದ ಮಹಿಳೆ ಚೆನ್ನೈ ಸಮೀಪದ ಮನಾಲಿ ನ್ಯೂ ಟೌನ್‌ನಲ್ಲಿ ಭಾನುವಾರ ಆತ್ಮಹತ್ಯೆ ಮಾಡಿದ್ದಾರೆ.
ಮೃತರನ್ನು ಭವಾನಿ ಎಂದು ಗುರುತಿಸಲಾಗಿದೆ. ಕಂದಂಚವಾಡಿ ಸಮೀಪದ ಹೆಲ್ತ್‌ಕೇರ್ ಸಂಸ್ಥೆಯ ಉದ್ಯೋಗಿ ಆಗಿದ್ದರು. ಅವರ ಪತಿ ಭಾಗ್ಯರಾಜ್ (35), ಖಾಸಗಿ ಸಂಸ್ಥೆಯಲ್ಲಿ ಉದ್ಯೋಗಿಯಾಗಿದ್ದು, ತೊರೈಪಾಕ್ಕಂ ಬಳಿ ವಾಸವಿದ್ದಾರೆ. ಇವರಿಗೆ ಮೂರು ಮತ್ತು ಒಂದೂವರೆ ವರ್ಷ ವಯಸ್ಸಿನ ಇಬ್ಬರು ಮಕ್ಕಳಿದ್ದಾರೆ.
ಬಿಎಸ್ ಪದವೀಧರೆ ಭವಾನಿ, ಕಳೆದ ಒಂದೂವರೆ ವರ್ಷದಿಂದ ಆನ್‌ಲೈನ್ ರಮ್ಮಿ ಆಡುವ ಅಭ್ಯಾಸವನ್ನು ಹೊಂದಿದ್ದರು. ಆರಂಭಿಕ ಹಂತದಲ್ಲಿ ಸಾಕಷ್ಟು ಲಾಭ ಗಳಿಸಿದ್ದರು. ಇದು ಚಟವಾಗಿ ಮಾರ್ಪಟ್ಟು, ಕಳೆದ ನಾಲ್ಕು ತಿಂಗಳಲ್ಲಿ ಆನ್‌ಲೈನ್ ರಮ್ಮಿಯಲ್ಲಿ ಹೆಚ್ಚು ಹಣ ಇಟ್ಟು ಆಡಿದರು. ಇದರಿಂದ ಭಾರಿ ನಷ್ಟವನ್ನು ಅನುಭವಿಸಿದ್ದು, 10 ಲಕ್ಷಕ್ಕೂ ಹೆಚ್ಚು ಸಾಲ ಮಾಡಿಕೊಂಡಿದ್ದರು. ಸಾಲದ ಮೊತ್ತ ಸರಿಹೊಂದಿಸಲು ಕುಟುಂಬ ಸದಸ್ಯರ ನೆರವು ಕೋರಿದ್ದರು. ಅಲ್ಲದೆ, ರಮ್ಮಿ ಆಟ ಮುಂದುವರಿಸಿದ್ದರು. ಭಾನುವಾರವೂ 30,000 ರೂಪಾಯಿ ಕಳೆದುಕೊಂಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಭಾನುವಾರ ರಾತ್ರಿ 8.30ರ ಸುಮಾರಿಗೆ ಬೇಗ ಬರುತ್ತೇನೆ ಎಂದು ಮನೆಯವರಿಗೆ ಹೇಳಿ, ಪಕ್ಕದ ಬೀದಿಯಲ್ಲಿರುವ ತನ್ನ ತಾಯಿ ಮನೆಗೆ ತೆರಳಿದ್ದರು. ಅಲ್ಲಿ ರಾತ್ರಿ ಊಟ ಮಾಡಿ ವಾಪಸ್ ಬರದ ಕಾರಣ, ಪತಿ ಭಾಗ್ಯರಾಜ್ ಅತ್ತೆ ಮನೆಗೆ ಧಾವಿಸಿದ್ದಾರೆ. ಈ ವೇಳೆ ಆಕೆ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ.
ಕೂಡಲೇ ಆಕೆಯನ್ನು ಸರ್ಕಾರಿ ಸ್ಟಾನ್ಲಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಕರೆದೊಯ್ದರೂ ಅಲ್ಲಿಗೆ ತಲುಪುವಷ್ಟರಲ್ಲಿ ಆಕೆ ಮೃತಪಟ್ಟಿದ್ದಾಳೆ ಎಂದು ಪೊಲೀಸರು ಹೇಳಿದರು.