ಚೆನ್ನೈ: ಕೊರೋನಾ ಲಸಿಕೆಯಿಂದ ಅಡ್ಡ ಪರಿಣಾಮ ಉಂಟಾಗಿದೆ ಎಂದು ಆರೋಪಿಸಿದ್ದ 40 ವರ್ಷದ ವ್ಯಕ್ತಿಗೆ ಪುಣೆಯ ಸೀರಂ ಇನ್ ಸ್ಟಿಟ್ಯೂಟ್ ಆಫ್ ಇಂಡಿಯಾ 100 ಕೋಟಿ ರೂಪಾಯಿ ಮಾನನಷ್ಟ ಮೊಕದ್ದಮೆ ಹೂಡುವ ಬೆದರಿಕೆ ಹಾಕಿದೆ.
ಕೋವಿಶೀಲ್ಡ್ ಲಸಿಕೆ ಪ್ರಯೋಗಕ್ಕೆ ಒಳಗಾಗಿದ್ದ ವ್ಯಕ್ತಿಯ ಪರ ವಕೀಲರಾದ ಆರ್. ರಾಜಾರಾಮ್ ಮತ್ತು ಪ್ರಸಾದ್ ಅವರು ಹೀಗೆಂದು ಆರೋಪ ಮಾಡಿದ್ದಾರೆ.
ಪುಣೆಯ ಸೀರಂ ಇನ್ ಸ್ಟಿಟ್ಯೂಟ್ ಆಫ್ ಇಂಡಿಯಾ ಅಭಿವೃದ್ಧಿಪಡಿಸುತ್ತಿರುವ ಕೊರೋನಾ ಲಸಿಕೆಯನ್ನು ಪ್ರಯೋಗದ ಕಾರಣಕ್ಕೆ ಪಡೆದುಕೊಂಡಿದ್ದ ವ್ಯಕ್ತಿಯ ಮೇಲೆ ಅಡ್ಡ ಪರಿಣಾಮ ಉಂಟಾಗಿದೆ. ಹೀಗಾಗಿ ಅವರು 5 ಕೋಟಿ ರೂಪಾಯಿ ಪರಿಹಾರಕ್ಕೆ ಬೇಡಿಕೆ ಇಟ್ಟಿದ್ದು, ವಕೀಲರ ಮೂಲಕ ನೋಟಿಸ್ ನೀಡಿದ್ದಾರೆ.
ಆದರೆ, ಇದೊಂದು ದುರುದ್ದೇಶದಿಂದ ಕೂಡಿದ ನೋಟಿಸ್ ಎಂದು ಪ್ರತಿಕ್ರಿಯೆ ನೀಡಿರುವ ಸೀರಂ ಇನ್ ಸ್ಟಿಟ್ಯೂಟ್ ಆಫ್ ಇಂಡಿಯಾ, ಲಸಿಕೆ ಪ್ರಯೋಗದಿಂದ ಅಡ್ಡ ಪರಿಣಾಮ ಉಂಟಾಗಿದೆ ಎಂದು ಆರೋಪಿಸಿದ ವ್ಯಕ್ತಿಯ ವಿರುದ್ಧ 100 ಕೋಟಿ ರೂಪಾಯಿ ಮಾನಹಾನಿ ಪ್ರಕರಣ ದಾಖಲಿಸುವ ಬೆದರಿಕೆ ಹಾಕಿದೆ ಎಂದು ಹೇಳಲಾಗಿದೆ.
ಲಸಿಕೆ ಪಡೆದುಕೊಂಡು ತೊಂದರೆಯಾಗಿದೆ ಎಂದು ಹೇಳಿದ್ದ ವ್ಯಕ್ತಿಯ ಮೇಲೆ ಲಸಿಕೆ ಪ್ರಯೋಗ ಪರಿಣಾಮಗಳ ಕುರಿತಾದ ಅಧ್ಯಯನ ಕೈಗೊಳ್ಳಲಾಗಿದೆ ಎನ್ನಲಾಗಿದೆ.