ಗಂಡ ತಂದ ಬಿರಿಯಾನಿಯಲ್ಲಿ ಪಾಲು ಕೇಳಿದ ಹೆಂಡ್ತಿ ಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿರೋ ಘಟನೆ ತಮಿಳುನಾಡಿನ ಚೆನ್ನೈನಲ್ಲಿ ನಡೆದಿದೆ. ಆರಂಭದಲ್ಲಿ ಗಂಡ ಹೆಂಡ್ತಿ ಜೀವನದಲ್ಲಿ ಜಿಗುಪ್ಸೆಗೊಂಡು ಆತ್ಮಹತ್ಯೆಗೆ ಯತ್ನಿಸಿರಬಹುದೆಂದು ತಿಳಿಯಲಾಗಿತ್ತು. ಆದ್ರೆ ಸಾವಿಗೂ ಮುನ್ನ ಮಹಿಳೆ ಹೇಳಿದ ಸತ್ಯ ಪೊಲೀಸರು ಸೇರಿದಂತೆ ನಾಗರೀಕರನ್ನ ಬೆಚ್ಚಿಬೀಳಿಸಿದೆ.
ಅಯನವರಂನಲ್ಲಿರುವ ಮನೆಯೊಂದರಲ್ಲಿ ಬೆಂಕಿ ಕಾಣಿಸಿಕೊಂಡಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಸಿಕ್ಕಿತ್ತು. ಮಂಗಳವಾರ ನಡೆದ ಘಟನೆಯಲ್ಲಿ ಮನೆಯಲ್ಲಿ ವಾಸಿಸುತ್ತಿದ್ದ ದಂಪತಿ ಪದ್ಮಾವತಿ (70) ಮತ್ತು ಕರುಣಾಕರನ್ (74) ತೀವ್ರವಾಗಿ ಗಾಯಗೊಂಡಿದ್ದರು. ಪೊಲೀಸರು ಅವರನ್ನು ಆಸ್ಪತ್ರೆಗೆ ಸೇರಿಸಿದ್ದರು.
ದಂಪತಿಗಳು ಒಟ್ಟಿಗೆ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂದು ಅವರು ಆರಂಭದಲ್ಲಿ ಶಂಕಿಸಿದ್ದರು. ಆದರೆ ಕಿಲ್ಪಾಕ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ (ಕೆಎಂಸಿಎಚ್) ಸಾಯುವ ಕೆಲವು ಗಂಟೆಗಳ ಮೊದಲು ಪದ್ಮಾವತಿ ನೀಡಿದ ಹೇಳಿಕೆ ಘಟನೆಯ ಹಿಂದಿನ ಸತ್ಯವನ್ನು ಬಹಿರಂಗಪಡಿಸಿತು.
ಕರುಣಾಕರನ್ ಮತ್ತು ಪದ್ಮಾವತಿ ಅವರು ಅಯನವರಂನ ಟ್ಯಾಗೋರ್ ನಗರದ ಮೂರನೇ ಬೀದಿಯಲ್ಲಿರುವ ಮನೆಯಲ್ಲಿ ವಾಸಿಸುತ್ತಿದ್ದರು. ಅವರ ನಾಲ್ಕು ಮಕ್ಕಳು ತಮ್ಮ ಕುಟುಂಬದೊಂದಿಗೆ ನಗರದ ಪ್ರತ್ಯೇಕ ಸ್ಥಳಗಳಲ್ಲಿ ವಾಸಿಸುತ್ತಿದ್ದರು.
ತನಿಖೆಯ ಸಮಯದಲ್ಲಿ ಪೊಲೀಸರು ಅವರ ನೆರೆಹೊರೆಯವರೊಂದಿಗೆ ಮಾತನಾಡಿ ದಂಪತಿಗಳನ್ನು ನೋಡಿಕೊಳ್ಳಲು ಯಾರೂ ಇಲ್ಲದ ಕಾರಣ ದಂಪತಿಗಳು ಖಿನ್ನತೆಗೆ ಒಳಗಾಗಿದ್ದರು ಎಂದು ತಿಳಿದಿದ್ದರು. ಆದ್ರೆ ಪದ್ಮಾವತಿ ಹೇಳಿದ್ದೇನೆಂದರೆ, ಸೋಮವಾರ ರಾತ್ರಿ 8 ಗಂಟೆ ಸುಮಾರಿಗೆ ತನ್ನ ಪತಿ ರೆಸ್ಟೋರೆಂಟ್‌ನಿಂದ ಬಿರಿಯಾನಿ ಖರೀದಿಸಿ ತಂದಿದ್ದರು. ಆದರೆ ಅದನ್ನು ಅವರು ಒಬ್ಬರೇ ತಿನ್ನುತ್ತಿದ್ದರು. ಈ ವೇಳೆ ನನಗೂ ಏಕೆ ಬಿರಿಯಾನಿ ಖರೀದಿಸಿ ತರಲಿಲ್ಲ. ತಂದಿರುವ ಬಿರಿಯಾನಿಯನ್ನು ತನಗೂ ಹಂಚುವಂತೆ ಕೇಳಿದೆ. ಆಗ ಜಗಳ ತೆಗೆದ ಪತಿ ನನ್ನೊಂದಿಗೆ ವಾಗ್ವಾದಕ್ಕೆ ಇಳಿದನು. ನಂತರ ಮೈಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿದ್ದ ಎಂದು ಆಕೆ ಹೇಳಿದ್ದಾಳೆ. ಘಟನೆಯಲ್ಲಿ ಕರುಣಾಕರನ್ ಗೆ ಶೇಕಡಾ 55 ರಷ್ಟು ಸುಟ್ಟ ಗಾಯಗಳಾಗಿವೆ.