ಹೆಣ್ಣುಮಗು ಅಂದಾಕ್ಷಣ ಮೂಗುಮುರಿಯೋ ಜನ ಇನ್ನೂ ಸಮಾಜದಲ್ಲಿ ಇದ್ದಾರೆ ಅನ್ನೋದು ವಿಪರ್ಯಾಸ. ಹೆಣ್ಣುಮಗುವಿಗೆ ಜನ್ಮ ನೀಡಿದಳು ಅನ್ನೋ ಕಾರಣಕ್ಕೆ ಗಂಡಿನ ಮನೆಯರು ಹೆಣ್ಣುಮಕ್ಕಳಿಗೆ ಕೊಡಬಾರದ ಚಿತ್ರಹಿಂಸೆ ಕೊಡುತ್ತಾರೆ. ಈಗ ಚೆನ್ನೈನಲ್ಲೂ ನಡೆದ ಅಂತಹದ್ದೇ ಒಂದು ಪ್ರಕರಣ ಬೆಳಕಿಗೆ ಬಂದಿದೆ.
ಇತ್ತೀಚೆಗೆ ಚೆನ್ನೈನ ಆಸ್ಪತ್ರೆಯೊಂದರಲ್ಲಿ ಸಾಯಿಶೃತಿ(31) ಹೆಣ್ಣು ಮಗುವಿಗೆ ಜನ್ಮನೀಡಿದ್ದಾರೆ. ತಾಯಿ – ಮಗು ಆರೋಗ್ಯವಂತರಾಗಿದ್ದಾರೆ. ಮನೆಗೆ ಲಕ್ಷ್ಮೀ ಬಂದಳು ಅಂತ ಖುಷಿ ಪಡುವ ಬದಲು ಗಂಡಿನ ಮನೆಯವರು ಸಾಯಿಶೃತಿಗೆ ಹೆಣ್ಣುಮಗುವಿಗೆ ಜನ್ಮ ನೀಡಿದಳು, ಅನ್ನೊ ಕಾರಣಕ್ಕೆ ಮಾನಸಿಕ ಚಿತ್ರಹಿಂಸೆ ಕೊಟ್ಟಿದ್ಧಾರೆ. ಅಷ್ಟೇ ಅಲ್ಲ ಅಪ್ಪನ ಮನೆಯಿಂದ 5 ಲಕ್ಷ ವರದಕ್ಷಿಣೆ ತರುವಂತೆ ಪೀಡಿಸುತ್ತಿದ್ದಾರೆ.
‘ತಾನು ಮಾರ್ಚ್ ನಲ್ಲಿ ಗರ್ಭಿಣಿಯಾಗಿದ್ದಾಗ, ಅತ್ತೆ, ಮಾವ ಹಾಗೂ ಗಂಡ ಮೂವರು ಕಿರುಕುಳ ನೀಡುತ್ತಿದ್ದರು. ಹೆಣ್ಣುಮಗುವಿಗೆ ಜನ್ಮ ನೀಡಿದರೆ ಕೊಂದು ಹಾಕುವುದಾಗಿ ಹೇಳಿ ಹೆದರಿಸಿದ್ದರು. ಈಗ ಹುಟ್ಟಿರುವ ಮಗು ಹೆಣ್ಣು ಅಂತ ಗೊತ್ತಾದ ತಕ್ಷಣ ಮನೆಯಿಂದ 5 ಲಕ್ಷ ವರದಕ್ಷಿಣೆ ತರುವಂತೆ ಒತ್ತಾಯ ಮಾಡಿದ್ದಾರೆ ಅಂತ ಸಾಯಿ ಶೃತಿ ಪೊಲೀಸರಿಗೆ ಗಂಡನ ಮನೆಯವರ ವಿರುದ್ಧ ಕೊಟ್ಟ ದೂರಿನಲ್ಲಿ ಹೇಳಿದ್ದಾರೆ.
ಗೃಹ ಸಚಿವಾಲಯದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಾಯಿ ಶೃತಿ, ತಮ್ಮ ಪತಿ ಮೋಹನ್ಕೃಷ್ಣನ್ ಹಾಗೂ ಅತ್ತೆ, ಮಾವನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ವರದಕ್ಷಿಣೆ ಕಿರುಕುಳ ಹಾಗೂ ಕೌಟುಂಬಿಕ ದೌರ್ಜನ್ಯದ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಸ್ಥಳೀಯ ಪೋಲೀಸರು ಪ್ರಕರಣ ದಾಖಲಿಸಿಕೊಂಡು ಪ್ರಾಥಮಿಕ ಹಂತದ ವಿಚಾರಣೆ ನಡೆಸುತ್ತಿದ್ದಾರೆ. ಮದುವೆ ಸಮಯದಲ್ಲಿ ಗಂಡಿನ ಮನೆಯವರಿಗೆ, ಹೆಣ್ಣಿನ ಮನೆಯವರು ಏನೇನು ಕೊಟ್ಟಿದ್ದಾರೆ. ಅನ್ನೋ ಮಾಹಿತಿಯನ್ನ ಸಂಗ್ರಹಿಸುತ್ತಿದ್ದಾರೆ. ವಿಚಾರಣೆಯ ನಂತರ ಈ ಪ್ರಕರಣವನ್ನ ಸ್ಥಳೀಯ ನ್ಯಾಯಾಲಯದ ಮುಂದೆ ಇಡಲಾಗುವುದು.