ಊಟದ ಸಂದರ್ಭದಲ್ಲಿ ಮೊಸರು ಬಳಕೆ ಸರ್ವೆ ಸಾಮಾನ್ಯ. ಅದರಲ್ಲೂ ದಕ್ಷಿಣ ಭಾರತೀಯರಂತೂ ಮೊಸರಿಲ್ಲದ ಊಟವನ್ನು ಕಲ್ಪಿಸಲಾರರು. ಅಲ್ಲದೆ ಮೊಸರು ಸೇವನೆಯಿಂದ ಹಲವು ಆರೋಗ್ಯಕರ ಪ್ರಯೋಜನಗಳು ಇವೆ.
ಮೊಸರಿನಲ್ಲಿ ಕಾರ್ಬೋಹೈಡ್ರೇಟ್ಸ್, ಪ್ರೊಟೀನ್, ಸೋಡಿಯಂ, ವಿಟಮಿನ್ ಮತ್ತು ಮಿನರಲ್ ಸೇರಿದಂತೆ ಹಲವು ಆರೋಗ್ಯಕರ ಅಂಶಗಳಿದ್ದು, ಜೀವನ ವಿಧಾನಕ್ಕೆ ಪೂರಕವಾಗಿವೆ. ಇದರ ಮಧ್ಯೆ ಚೆನ್ನೈ ವೈದ್ಯೆಯೊಬ್ಬರು ಹಾಕಿರೋ ಪೋಸ್ಟ್ ಈಗ ದೊಡ್ಡ ಮಟ್ಟದ ಚರ್ಚೆಗೆ ಕಾರಣವಾಗಿದೆ.
ಕವಿತಾ ದೇವ್ ಎಂಬ ಈ ವೈದ್ಯೆ ಸೋಶಿಯಲ್ ಮೀಡಿಯಾ ವೇದಿಕೆಯಾದ ‘ಎಕ್ಸ್’ ನಲ್ಲಿ ಈ ರೀತಿಯಾಗಿ ಮೊಸರು ಸೇವಿಸಬೇಡಿ ಎಂಬ ಶೀರ್ಷಿಕೆ ಕೊಟ್ಟು ಪೋಸ್ಟ್ ಹಾಕಿದ್ದು, ರಾತ್ರಿ ವೇಳೆ ಮೊಸರು ಸೇವಿಸಬೇಡಿ ಹಾಗೂ ದಿನನಿತ್ಯ ಮೊಸರು ಸೇವಿಸಬೇಡಿ ಎಂದು ಹೇಳಿದ್ದಾರೆ. ಅಲ್ಲದೆ ಇದಕ್ಕೆ ಕೆಲ ಕಾರಣಗಳನ್ನು ಸಹ ಕೊಟ್ಟಿದ್ದಾರೆ.
ಇದಕ್ಕೆ ಹಲವಾರು ಮಂದಿ ತಮ್ಮ ಪ್ರತಿಕ್ರಿಯೆಗಳನ್ನು ನೀಡುತ್ತಿರುವ ಮಧ್ಯೆ ಬೆಂಗಳೂರಿನ ವೈದ್ಯ ದೀಪಕ್ ಕೃಷ್ಣಮೂರ್ತಿ ಎಂಬವರು ಕವಿತಾ ಅವರ ಪೋಸ್ಟ್ ಗೆ ಪ್ರತಿಕ್ರಿಯಿಸಿ, ಬಹುತೇಕ ದಕ್ಷಿಣ ಭಾರತೀಯರು ದಿನನಿತ್ಯ ಮೊಸರು ಬಳಸುತ್ತಾರೆ. ಇದು ಶತಮಾನಗಳಿಂದಲೂ ನಡೆದುಕೊಂಡು ಬಂದಿದ್ದು, ಇದೀಗ ಮೊಸರು ಅನಾರೋಗ್ಯಕರವೆಂದು ಇದ್ದಕ್ಕಿದ್ದಂತೆ ಜ್ಞಾನೋದಯವಾಗಿದೆ ಎಂದು ವ್ಯಂಗ್ಯವಾಡಿದ್ದಾರೆ. ಇವರಿಬ್ಬರ ಪೋಸ್ಟ್ ಇಟ್ಟುಕೊಂಡು ಸೋಶಿಯಲ್ ಮೀಡಿಯಾದಲ್ಲಿ ಬಹುದೊಡ್ಡ ಚರ್ಚೆ ನಡೆದಿದ್ದು, ಮೊಸರು ಸೇವನೆ ಕುರಿತಂತೆ ನೀವು ಸಹ ನಿಮ್ಮ ಅಭಿಪ್ರಾಯ ಹೇಳಿ.