ಚೆನ್ನೈ: ಪೊಲೀಸ್ ಕಸ್ಟಡಿಯಲ್ಲಿದ್ದ ಸಂದರ್ಭದಲ್ಲಿ ವಿಘ್ನೇಶ್ ಎಂಬ ಯುವಕ ಏ. 19ರಂದು ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದು, ಪೊಲೀಸರು ಆತನನ್ನು ಬೆನ್ನಟ್ಟಿ ಹಿಡಿಯುವ ದೃಶ್ಯ ಸಿಸಿ ಟಿವಿ ಒಂದರಿಂದ ಈಗ ಬಹಿರಂಗವಾಗಿದೆ.
ವಿಘ್ನೇಶ್ ಹಾಗೂ ಆತನ ಗೆಳೆಯ ಸುರೇಶ್‌ನನ್ನು ಪೊಲೀಸರು ಬಂಧಿಸಿದ ಬಳಿಕ ವಿಘ್ನೇಶ್ ಪೊಲೀಸರ ಕಸ್ಟಡಿಯಲ್ಲಿ ಇರುವಾಗಲೇ ಏ. 19ರಂದು ಅನುಮಾನಾಸ್ಪದವಾಗಿ ಮೃತಪಟ್ಟಿದ್ದ. ಈ ಇಬ್ಬರೂ ಗಲಾಟೆ ಮಾಡಿದ್ದರೆಂದು ಬಂಧಿಸಲು ಹೋಗಿದ್ದಾಗ ವಿಘ್ನೇಶ್ ಚೂರಿಯಿಂದ ಪೊಲೀಸರಿಗೆ ಇರಿಯಲು ಯತ್ನಿಸಿದ್ದ ಎಂದು ಪೊಲೀಸರು ಹೇಳಿದ್ದರು. ಏ. 19ರ ಬೆಳಗ್ಗೆ ವಿಘ್ನೇಶ್ ಉಪಾಹಾರ ಸೇವಿಸುತ್ತಿದ್ದಾಗ ಮೂರ್ಚೆ ರೋಗಕ್ಕೆ ಒಳಗಾಗಿದ್ದ. ತಕ್ಷಣವೇ ಆಸ್ಪತ್ರೆಗೆ ದಾಖಲಿಸಿದರೂ ಆತ ಮೃತಪಟ್ಟನೆಂದು ತಿಳಿಸಿದ್ದರು.
ಆರೋಪಗಳು:
ಆದರೆ, ಕಸ್ಟಡಿಯಲ್ಲಿರುವಾಗ ಪೊಲೀಸರ ದೌರ್ಜನ್ಯದಿಂದಲೇ ಆತ ಮೃತಪಟ್ಟಿದ್ದಾನೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಆದರೆ, ನಾವು ಸುಮ್ಮನಿರಬೇಕೆಂದು ಪೊಲೀಸರು 1 ಲಕ್ಷ ರೂ. ಆಮಿಷವೊಡ್ಡಿದ್ದರೆಂದು ಮೃತನ ಸಹೋದರ ವಿನೋದ್ ಹೇಳಿದ್ದಾರೆ.
ಫೇಸ್‌ಟ್ಯಾಗ್ ಆಪ್ ಬಳಸಿ ಪೊಲೀಸರು ವಿಘ್ನೇಶ್ ಮತ್ತು ಸುರೇಶ್ ಅವರನ್ನು ತಡೆದು ನಿಲ್ಲಿಸಿದ್ದಾರೆ. ಈ ವೇಳೆ ಸುರೇಶ್ ವಿರುದ್ಧ ಹಲವು ಪ್ರಕರಣಗಳು ಇರುವುದು ಬಹಿರಂಗವಾಗಿದೆ. ವಿಚಾರಣೆಯ ವೇಳೆ ಕುದುರೆಗಳಿಗೆ ಹುಲ್ಲು ಕತ್ತರಿಸಲು ಬಳಸುತ್ತಿದ್ದ ಚೂರಿಯೊಂದನ್ನು ವಿಘ್ನೇಶ್ ಪೊಲೀಸರಿಗೆ ಕೊಟ್ಟಿದ್ದಾನೆ. ಆದರೆ, ಪೊಲೀಸರು ವಿಘ್ನೇಶ್‌ಗೆ ಚೆನ್ನಾಗಿ ಹೊಡೆದಿದ್ದಾರೆ ಎಂದು ಪ್ರತ್ಯಕ್ಷದರ್ಶಿ ಪ್ರಭು ಹೇಳಿದ್ದಾರೆ.
ವಿಘ್ನೇಶ್ ಕುಟುಂಬಕ್ಕೆ 10 ಲಕ್ಷ ರೂ. ಪರಿಹಾರವನ್ನು ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್ ಘೋಷಿಸಿದ್ದಾರೆ. ಪ್ರಕರಣವನ್ನು ಸಿಬಿ-ಸಿಐಡಿಗೆ ವರ್ಗಾಯಿಸಲಾಗಿದೆ. ಒಬ್ಬರು ಪಿಎಸ್‌ಐ, ಒಬ್ಬರು ಕಾನ್‌ಸ್ಟೆಬಲ್ ಹಾಗೂ ಒಬ್ಬರು ಗೃಹರಕ್ಷಕರನ್ನು ಅಮಾನತು ಮಾಡಲಾಗಿದೆ.