ಚೆನ್ನೈ: ಈ ಕನ್ನಡಕಗಳು ಜನರನ್ನು ಬೆತ್ತಲೆಯಾಗಿ ತೋರಿಸುತ್ತದೆ ಎಂದು ಹೇಳಿ ನಕಲಿ ಕನ್ನಡಕಗಳನ್ನು ಮಾರಾಟ ಮಾಡಿದ ಆರೋಪದ ಮೇಲೆ ನಾಲ್ವರನ್ನು ಚೆನ್ನೈನಿಂದ ಬಂಧಿಸಲಾಗಿದೆ.
ಬೆಂಗಳೂರಿನ 39 ವರ್ಷದ ವ್ಯಕ್ತಿ ಹಾಗೂ ಈತನ ನೇತೃತ್ವದ ಗ್ಯಾಂಗ್, ಈ ಕನ್ನಡಕಗಳನ್ನು 1 ಕೋಟಿ ರೂಪಾಯಿಗೆ ಮಾರಾಟ ಮಾಡಿತ್ತು. ಅಲ್ಲದೆ ಪ್ರಯೋಗಕ್ಕಾಗಿ ರಹಸ್ಯ ಸ್ಥಳಕ್ಕೆ ಕರೆದುಕೊಂಡು ಹೋಗುತ್ತಿದ್ದ ಈ ವಂಚಕರಿಗೆ ಶ್ರೀಮಂತ ಉದ್ಯಮಿಗಳೇ ಟಾರ್ಗೆಟ್ ಆಗಿದ್ದರು.
ವರದಿಯ ಪ್ರಕಾರ, ಆರೋಪಿಗಳನ್ನು ಬೆಂಗಳೂರಿನ ಆರ್. ಸೂರ್ಯ ಮತ್ತು ಆತನ ಸಹಾಯಕರಾದ ಘುಬಾಬಿಬ್ (37), ಜಿತು ಜಯನ್ (24) ಮತ್ತು ಕೇರಳದ ಎಸ್. ಇರ್ಷಾದ್ (21) ಎಂದು ಗುರುತಿಸಲಾಗಿದೆ. ಕೋಡಂಬಾಕ್ಕಂನ ಹೋಟೆಲ್‌ನಿಂದ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ.
ಪುರಾತನ ವಸ್ತುಗಳನ್ನು ಮಾರಾಟ ಮಾಡುವುದಾಗಿ ಭರವಸೆ ನೀಡಿ ಸೂರ್ಯ 5 ಲಕ್ಷ ರೂಪಾಯಿಗಳನ್ನು ವಂಚಿಸಿದ್ದಾರೆ ಎಂದು ಚೆನ್ನೈನ ವ್ಯಾಪಾರಿಯ ದೂರಿನ ಮೇರೆಗೆ ಪೊಲೀಸರು ಆತನನ್ನು ಬಂಧಿಸಿದ್ದಾರೆ. ನಾಲ್ವರು ಆರೋಪಿಗಳನ್ನು ಮ್ಯಾಜಿಸ್ಟ್ರೇಟ್ ಕೋರ್ಟ್ ಮುಂದೆ ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಕನ್ನಡಕಗಳು ಹೇಗೆ ಕೆಲಸ ಮಾಡುತ್ತವೆ ಎಂಬುದಕ್ಕೆ ಆರೋಪಿಗಳು ಗ್ರಾಹಕರಿಗೆ ವಿಡಿಯೋಗಳನ್ನು ತೋರಿಸಿದ್ದು, ನಂತರ ಅವುಗಳನ್ನು ಪರೀಕ್ಷಿಸಲು ರಹಸ್ಯ ಸ್ಥಳಕ್ಕೆ ಕರೆದೊಯ್ದಿದ್ದಾರೆ. ವಂಚಕರ ತಂಡ ಪ್ರಯೋಗಗಳನ್ನು ನಡೆಸಿದ ಕತ್ತಲೆಯ ಕೋಣೆಯಲ್ಲಿ ನಗ್ನವಾಗಿ ಪೋಸ್ ನೀಡಲು ಕೆಲವರಿಗೆ ಹಣ ನೀಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ನಕಲಿ ಕನ್ನಡಕಗಳನ್ನು ಮಾರಾಟ ಮಾಡಿ ಅದರಲ್ಲಿ ಅವರು ಯಶಸ್ವಿಯಾದ್ರು. ಬಳಿಕ ಅಕ್ಕಿ ಬೀಸುವ ಕಲ್ಲನ್ನು ಮಾರಾಟ ಮಾಡುವ ಯೋಜನೆಯಲ್ಲಿ ತೊಡಗಿದ್ದರು. ಚೆನ್ನೈ ಮೂಲದ ವ್ಯಾಪಾರಿಗೆ ಇದರಿಂದ ಸಮೃದ್ಧಿ ತರುತ್ತದೆ ಎಂದು ನಂಬಿಸಿದ್ದರು. ಕೆಲವರ ಮೂಢನಂಬಿಕೆಗಳನ್ನೇ ವಂಚಕರ ತಂಡ ದಾಳವಾಗಿ ಪ್ರಯೋಗಿಸಿತು. ಇದೀಗ ಖಾಕಿ ಬಲೆಗೆ ಬಿದ್ದಿದ್ದು, ಕಂಬಿ ಎಣಿಸುವಂತಾಗಿದೆ.