ಕೋವಿಡ್ ಪ್ರಕರಣಗಳು ಆತಂಕಕಾರಿ ರೂಪದಲ್ಲಿ ಉಲ್ಬಣವಾಗುತ್ತಿರುವ ಮಧ್ಯೆ, ಚೆನ್ನೈನ ಕಾಲೇಜ್ ಒಂದು ಕೊರೋನಾ ಹಾಟ್ ಸ್ಪಾಟ್ ಆಗಿ ಬದಲಾಗಿದೆ. ಕ್ರೋಮ್‌ಪೇಟ್‌ನಲ್ಲಿರುವ ಮದ್ರಾಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ 67 ವಿದ್ಯಾರ್ಥಿಗಳಲ್ಲಿ ಕರೋನವೈರಸ್ ಪತ್ತೆಯಾಗಿದ್ದು ಹೊಸದೊಂದು ಕ್ಲಸ್ಟರ್ ಹೊರಹೊಮ್ಮಿದೆ.
ವರದಿಯ ಪ್ರಕಾರ, 67 ವಿದ್ಯಾರ್ಥಿಗಳಲ್ಲಿ – 48 ಹುಡುಗರು ಮತ್ತು 19 ಹುಡುಗಿಯರಿಗೆ ಸೋಂಕು ತಗುಲಿದ್ದು, 16 ವಿದ್ಯಾರ್ಥಿಗಳನ್ನು ಹೋಮ್ ಕ್ವಾರಂಟೈನ್‌ಗೆ ಕಳುಹಿಸಲಾಗಿದೆ. ಉಳಿದವರನ್ನು ಎರಡು ಪ್ರತ್ಯೇಕ ಹಾಸ್ಟೆಲ್‌ಗಳಲ್ಲಿ ಪ್ರತ್ಯೇಕಿಸಲಾಗಿದೆ. ಸೋಂಕಿಗೆ ಒಳಗಾಗದ ಮತ್ತು ನೆಗೆಟಿವ್ ಪರೀಕ್ಷೆ ಮಾಡಿದ ಇತರ ಎಲ್ಲ ವಿದ್ಯಾರ್ಥಿಗಳನ್ನು ಬುಧವಾರ ಕ್ಯಾಂಪಸ್ ಖಾಲಿ ಮಾಡಲು ತಿಳಿಸಲಾಗಿದೆ.
ಡಿಸೆಂಬರ್ 30 ರಂದು ಮುನ್ನೆಚ್ಚರಿಕೆ ಕ್ರಮವಾಗಿ 169 ವಿದ್ಯಾರ್ಥಿಗಳನ್ನು ಪರೀಕ್ಷಿಸಲು ಕಾಲೇಜ್ ನಿರ್ಧರಿಸಿತು. ಪ್ರಾರಂಭದ ಹಂತದಲ್ಲಿ ಏಳು ಮಂದಿಯಲ್ಲಿ ಕೊರೋನಾ ಸೋಂಕು ದೃಢವಾಗಿತ್ತು. ನಂತರ ಜನವರಿ 2 ರಂದು 250 ಮತ್ತು 3 ರಂದು 797 ವಿದ್ಯಾರ್ಥಿಗಳನ್ನ ಪರೀಕ್ಷೆಗೆ ಒಳಪಡಿಸಲಾಯ್ತು. ಆಗ 60 ವಿದ್ಯಾರ್ಥಿಗಳಿಗೆ ಕೋವಿಡ್-19 ಪಾಸಿಟಿವ್ ಬಂದಿದೆ. ವಿದ್ಯಾರ್ಥಿಗಳನ್ನು ಪ್ರತ್ಯೇಕ ಕಟ್ಟಡದಲ್ಲಿಟ್ಟು, ಪ್ರತ್ಯೇಕ ಸೌಲಭ್ಯಗಳೊಂದಿಗೆ ಮಾನಿಟರ್ ಮಾಡಲಾಗುತ್ತಿದೆ. ಅವರು ಈಗ ಚೆನ್ನಾಗಿ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಸಂಬಂಧಪಟ್ಟ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.