ಚೆನ್ನೈ: ಚೆನ್ನೈ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು 70 ಕೋಟಿ ರೂಪಾಯಿ ಮೌಲ್ಯದ ಹೆರಾಯಿನ್ ವಶ ಪಡೆದುಕೊಂಡಿದ್ದಾರೆ.
ವೈದ್ಯಕೀಯ ಚಿಕಿತ್ಸೆಗಾಗಿ ಭಾರತಕ್ಕೆ ಬಂದಿದ್ದ ಇಬ್ಬರು ಅಂತರರಾಷ್ಟ್ರೀಯ ಪ್ರಯಾಣಿಕರನ್ನು ಬಂಧಿಸಿ, 70 ಕೋಟಿ ರೂಪಾಯಿ ಮೌಲ್ಯದ ಹೆರಾಯಿನ್ ವಶಕ್ಕೆ ಪಡೆಯಲಾಗಿದೆ. ಮಾದಕ ವಸ್ತುಗಳ ಕಳ್ಳ ಸಾಗಣೆಗೆ ಸಂಬಂಧಿಸಿದಂತೆ ನಿರ್ದಿಷ್ಟ ಮಾಹಿತಿಯ ಮೇರೆಗೆ ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳು ಜೋಹಾನ್ಸ್ ಬರ್ಗ್ ನಿಂದ ದೋಹಾ ಮೂಲಕ ಕತಾರ್ ಏರ್ ವೇಸ್ ವಿಮಾನದಲ್ಲಿ ಚೆನ್ನೈಗೆ ಆಗಮಿಸಿದ ಇಬ್ಬರು ಮಹಿಳಾ ಪ್ರಯಾಣಿಕರನ್ನು ಪರಿಶೀಲನೆ ನಡೆಸಿದಾಗ ಇಷ್ಟೊಂದು ದೊಡ್ಡ ಪ್ರಮಾಣದ ಹೆರಾಯಿನ್ ಕಂಡು ಬಂದಿದೆ.
ಅಧಿಕಾರಿಗಳು ನೀಡಿರುವ ಮಾಹಿತಿ ಪ್ರಕಾರ, ಮಹಿಳೆಯೊಬ್ಬಳು ಗಾಲಿ ಕುರ್ಚಿ ಬಳಸಿದ್ದಾಳೆ. ಆದರೆ ಆಕೆ ಸದೃಢವಾಗಿದ್ದರೂ ಗಾಲಿ ಕುರ್ಚಿ ಬಳಸಿದ್ದ ಅನುಮಾನದ ಮೇಲೆ ಪರಿಶೀಲಿಸಿದಾಗ ಆಕೆ ಸರಿಯಾದ ಉತ್ತರ ನೀಡಿರಲಿಲ್ಲ. ಅವರನ್ನು ಪರಿಶೀಲಿಸಿದಾಗ 8 ಪ್ಲಾಸ್ಟಿಕ್ ಕವಲ್ ಗಳಲ್ಲಿ ಹೆರಾಯಿನ್ ಮುಚ್ಚಿಟ್ಟುಕೊಂಡು ಅದರ ಮೇಲೆ ಬೇರೆ ಪದರಗಳಿಂದ ಮರೆ ಮಾಚಲಾಗಿತ್ತು. ವಾಸನೆ ಮರೆಮಾಚಲು ಮಸಾಲೆಯುಕ್ತ ಪುಡಿ ಚಿಮುಕಿಸಲಾಗಿತ್ತು.
ವಶಕ್ಕೆ ಪಡೆಯಲಾದ ಒಟ್ಟು 9.87 ಕೆಜಿ ಹೆರಾಯಿನ್ ಗೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಅಂದಾಜು 70 ಕೋಟಿ ರೂ. ಮೌಲ್ಯವಿದೆ. ಎನ್.ಡಿ.ಪಿ.ಎಸ್. ಕಾಯ್ದೆಯಡಿ ಮಹಿಳಾ ಪ್ರಯಾಣಿಕರಿಬ್ಬರನ್ನೂ ಬಂಧಿಸಲಾಗಿದೆ.
ಹೆಚ್ಚಿನ ವಿಚಾರಣೆಯ ವೇಳೆ ಜಿಂಬಾಬ್ವೆಯ ಮಹಿಳೆ ದೆಹಲಿಯ ಖಾಸಗಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ವೈದ್ಯಕೀಯ ಚಿಕಿತ್ಸೆಗಾಗಿ ಭಾರತಕ್ಕೆ ಪ್ರಯಾಣಿಸುತ್ತಿದ್ದಳು. ಆಕೆಯೊಂದಿಗೆ ದಕ್ಷಿಣ ಆಫ್ರಿಕಾದ ಕೇಪ್ ಟೌನ್ ನಿವಾಸಿ ಕೂಡ ಆಗಮಿಸಿದ್ದು, ಇಬ್ಬರೂ ಡ್ರಗ್ಸ್ ಸಾಗಿಸುತ್ತಿರುವುದು ಗೊತ್ತಾಗಿದೆ.