ವಿಶ್ವದ ಅತಿ ಎತ್ತರದ ರೈಲ್ವೆ ಬ್ರಿಡ್ಜ್ ಎಂಬ ಹೆಗ್ಗಳಿಕೆ ಹೊಂದಿರುವ ಜಮ್ಮು ಕಾಶ್ಮೀರದ ಚೆನಾಬ್ ಸೇತುವೆ ಈ ವರ್ಷಾಂತ್ಯದ ವೇಳೆಗೆ ಉದ್ಘಾಟನೆಗೊಳ್ಳಲಿದೆ. ಈಗಾಗಲೇ ಸೇತುವೆ ಮೇಲೆ ಪರೀಕ್ಷಾರ್ಥ ರೈಲು ಸಂಚಾರ ಆರಂಭವಾಗಿದ್ದು, ಇದರ ಮೈನವಿರೇಳಿಸುವ ದೃಶ್ಯದ ವಿಡಿಯೋ ವೈರಲ್ ಆಗಿದೆ.
ಉದಂಪುರ್ – ಶ್ರೀನಗರ – ಬಾರಮುಲ್ಲಾ ನಡುವೆ ಸಂಚರಿಸುವ ಈ ರೈಲು ಜಮ್ಮು ಕಾಶ್ಮೀರವನ್ನು ಭಾರತದ ಇತರ ಪ್ರದೇಶಗಳಿಗೆ ಸಂಪರ್ಕಿಸಲಿದೆ. ಈ ರೈಲ್ವೆ ಸೇತುವೆ ಪ್ಯಾರಿಸ್ ನಲ್ಲಿರುವ ಪ್ರಸಿದ್ಧ ಐಫೆಲ್ ಟವರ್ ಗಿಂತ 35 ಮೀಟರ್ ಎತ್ತರವಿದೆ ಎಂದರೆ ನಿಮಗೆ ಅಂದಾಜು ಸಿಗಬಹುದು.
ಒಟ್ಟು 1 ಪಾಯಿಂಟ್ ಮೂರು ಕಿಲೋಮೀಟರ್ ಉದ್ದವಿರುವ ಈ ಸೇತುವೆ ಕಾಟ್ರಾದಿಂದ ಬನಿಹಾಲ್ ವರೆಗೆ 111 ಕಿಲೋಮೀಟರ್ ಸಂಚಾರಕ್ಕೆ ಸಂಪರ್ಕವಾಗಲಿದೆ. 2023 ಡಿಸೆಂಬರ್ ಅಥವಾ ಜನವರಿ 2024 ರಿಂದ ಇಲ್ಲಿ ರೈಲು ಸಂಚಾರ ಅಧಿಕೃತವಾಗಿ ಆರಂಭವಾಗಲಿದ್ದು, ವಂದೇ ಭಾರತ್ ಎಕ್ಸ್ ಪ್ರೆಸ್ ರೈಲು ಸಹ ಸಂಚರಿಸಲಿದೆ.