ಪಿಜ್ಜಾ, ಬರ್ಗರ್ ಸೇರಿದಂತೆ ಜಂಕ್ ಫುಡ್ ಗಳನ್ನು ಸೇವಿಸುವವರ ಸಂಖ್ಯೆ ಸಾಕಷ್ಟಿದೆ. ಇದು ಆರೋಗ್ಯಕ್ಕೆ ಒಳ್ಳೆಯದಲ್ಲ ಎಂದು ಸಾರಿಸಾರಿ ಹೇಳಿದ್ರೂ ಜನ ಕೇಳುವುದಿಲ್ಲ.
ಈ ಹಿಂದೆ ಈ ಜಂಕ್ ಫುಡ್ ಗಳು ಹೃದಯಕ್ಕೆ ಹಾನಿಕರವೆಂದು ಸಂಶೋಧನೆಯೊಂದು ಹೇಳಿತ್ತು. ಈಗ ಮತ್ತೊಂದು ಅಧ್ಯಯನದಲ್ಲಿ, ಪಿಜ್ಜಾ ಮತ್ತು ಬರ್ಗರ್ ಉಸಿರಾಟ ಮತ್ತು ಮೆದುಳಿಗೆ ಸಂಬಂಧಿಸಿದ ಕಾಯಿಲೆಗಳಿಗೆ ಕಾರಣವಾಗುತ್ತದೆ ಎಂಬ ಸಂಗತಿ ಬಹಿರಂಗವಾಗಿದೆ.
ಈ ಹೊಸ ಅಧ್ಯಯನವನ್ನು ಜಾರ್ಜ್ ವಾಷಿಂಗ್ಟನ್ ವಿಶ್ವವಿದ್ಯಾಲಯ, ಸೌತ್‌ವೆಸ್ಟ್ ರಿಸರ್ಚ್ ಇನ್‌ಸ್ಟಿಟ್ಯೂಟ್, ಬೋಸ್ಟನ್ ವಿಶ್ವವಿದ್ಯಾಲಯ ಮತ್ತು ಹಾರ್ವರ್ಡ್ ವಿಶ್ವವಿದ್ಯಾಲಯದ ಸಂಶೋಧಕರು, ಜರ್ನಲ್ ಆಫ್ ಎಕ್ಸ್ ಪೋಸರ್ ಸೈನ್ಸ್ & ಎನ್ವಿರಾನ್‌ಮೆಂಟಲ್ ಎಪಿಡೆಮಿಯಾಲಜಿಯಲ್ಲಿ ಪ್ರಕಟಿಸಿದ್ದಾರೆ.
ಮೆಕ್‌ಡೊನಾಲ್ಡ್ಸ್, ಬರ್ಗರ್ ಕಿಂಗ್, ಪಿಜ್ಜಾ ಹಟ್, ಡೊಮಿನೋಸ್ ಸೇರಿದಂತೆ ಪ್ರಸಿದ್ಧ ಆಹಾರಗಳಿಗೆ, ಪ್ಲಾಸ್ಟಿಕ್ ಮೃದುವಾಗಿಡಲು ನೆರವಾಗುವ phthalates ವಸ್ತುವನ್ನು ಬಳಸಲಾಗ್ತಿದೆಯಂತೆ. ಸುಮಾರು 64 ಮಾದರಿಗಳ ಪರೀಕ್ಷೆ ನಡೆದಿದೆ. ಅದ್ರಲ್ಲಿ ಶೇಕಡಾ 80ರಷ್ಟು ಆಹಾರ DnBP ಒಳಗೊಂಡಿತ್ತು. ಶೇಕಡಾ 70ರಷ್ಟರಲ್ಲಿ DEHP ಬಳಸಲಾಗಿತ್ತು.
phthalates ಒಂದು ರಾಸಾಯನಿಕ. ಇದನ್ನು ಸೌಂದರ್ಯವರ್ಧಕಗಳು, ಡಿಟರ್ಜೆಂಟ್ಸ್ ಸೇರಿದಂತೆ ಅನೇಕ ಉತ್ಪನ್ನಗಳಲ್ಲಿ ಬಳಸಲಾಗುತ್ತದೆ. ವಸ್ತುಗಳನ್ನು ಬೇಕಾದಂತೆ ಬಾಗಿಸಲು ಇದು ನೆರವಾಗುತ್ತದೆ. ಈ ರಾಸಾಯನಿಕಗಳು ಅಸ್ತಮಾ, ಮಕ್ಕಳಲ್ಲಿ ಮೆದುಳಿನ ಸಮಸ್ಯೆ ಸೇರಿದಂತೆ ಅನೇಕ ಸಮಸ್ಯೆಗೆ ಕಾರಣವಾಗುತ್ತದೆ. ಸಂತಾನೋತ್ಪತ್ತಿ ಸಮಸ್ಯೆಗೂ ಕಾರಣವಾಗುತ್ತದೆ.