ಬೆಳಗಾವಿ: ವಿಚಾರಣಾಧೀನ ಕೈದಿಗೆ ರಾಸಾಯನಿಕ ಮಿಶ್ರಿತ ಪೇಡ ತಿನ್ನಿಸಲು ಸಂಚು ರೂಪಿಸಿದ್ದ ಮಹಿಳೆ ವಿರುದ್ಧ ಪೊಲೀಸರು ದೂರು ದಾಖಲಿಸಿದ್ದಾರೆ.
ಬೆಳಗಾವಿ ಹಿಂಡಲಗಾ ಜೈಲಿನಲ್ಲಿ ವಿಚಾರಣಾಧೀನ ಕೈದಿಗೆ ರಾಸಾಯನಿಕ ಮಿಶ್ರಿತ ಪೇಡ ತಿನ್ನಿಸಲು ಹುಕ್ಕೇರಿ ತಾಲೂಕಿನ ಬಡಕುಂದ್ರಿ ಗ್ರಾಮದ ರೇಖಾ ಮರಡಿ ಸಂಚು ರೂಪಿಸಿದ್ದು, ಕಾರಾಗೃಹ ಸಿಬ್ಬಂದಿ ಪತ್ತೆ ಮಾಡಿದ್ದಾರೆ. ಕೊಲೆ ಹಲ್ಲೆ ಸೇರಿದಂತೆ ಐದು ಪ್ರಕರಣಗಳಲ್ಲಿ ಜೈಲು ಸೇರಿರುವ ವಿಚಾರಣಾಧೀನ ಕೈದಿ ಕಾಶಪ್ಪ ರಾಮಪ್ಪ ಕರಿಕೋಳ ಭೇಟಿಗಾಗಿ ಮಾರ್ಚ್ 13ರಂದು ಕಾರಾಗೃಹಕ್ಕೆ ರೇಖಾ ಮರಡಿ ಬಂದಿದ್ದರು.
ಅರ್ಧ ಕೆಜಿ ಪೇಡವನ್ನು ಕಾಶಪ್ಪನವರಿಗೆ ನೀಡುವಂತೆ ಜೈಲು ಸಿಬ್ಬಂದಿ ಬಳಿ ಕೊಟ್ಟಿದ್ದಾರೆ. ಭದ್ರತಾ ಸಿಬ್ಬಂದಿ ಪೇಡ ಪರಿಶೀಲಿಸಿದಾಗ ಪಾದರಸ ಮಾದರಿಯ ರಾಸಾಯನಿಕ ಪದಾರ್ಥ ಇಂಜೆಕ್ಟ್ ಮಾಡಿರುವುದು ಪತ್ತೆಯಾಗಿದ್ದು, ವಿಚಾರಿಸುತ್ತಿದ್ದಂತೆ ರೇಖಾ ಪರಾರಿಯಾಗಿದ್ದಾರೆ. ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ರೇಖಾ ಮರಡಿ ವಿರುದ್ಧ ಕಾರಾಗೃಹ ಅಧೀಕ್ಷಕ ಕೃಷ್ಣಕುಮಾರ್ ದೂರು ದಾಖಲಿಸಿದ್ದಾರೆ.