ಧಾರವಾಡ: ಮುಂಗಾರು ವಿಳಂಬವಾಗಿರುವುದರಿಂದ ರಾಜ್ಯದಲ್ಲಿ ಕೃಷಿ ಚಟುವಟಿಕೆಗಳಿಗೆ ಹಿನ್ನಡೆಯಾಗಿದ್ದು, ಮಳೆಯಾಗದಿದ್ದರೆ ಮೋಡ ಬಿತ್ತನೆ ಕೈಗೊಳ್ಳುವುದಾಗಿ ಕೃಷಿ ಸಚಿವ ಎನ್. ಚೆಲುವರಾಯಸ್ವಾಮಿ ತಿಳಿಸಿದ್ದಾರೆ.
ಬೆಳಗಾವಿ ಮತ್ತು ಧಾರವಾಡದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದೇ ಪರಿಸ್ಥಿತಿ ಮುಂದುವರೆದಲ್ಲಿ ಮೋಡ ಬಿತ್ತನೆ ಕುರಿತು ಚಿಂತನೆ ನಡೆದಿದೆ. ಪರಿಸ್ಥಿತಿ ಅವಲೋಕನ ನಡೆಸಿ ಚರ್ಚೆ ಮಾಡಿ ಅಗತ್ಯವಾದರೆ ಮೋಡ ಬಿತ್ತನೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.
ಕಳೆದ ಬಾರಿಗಿಂತ ಈ ಬಾರಿ ಶೇಕಡ 37ರಷ್ಟು ಮಳೆ ಕೊರತೆಯಾಗಿದೆ. ಈ ವೇಳೆಗೆ ರಾಜ್ಯದಲ್ಲಿ ಮುಂಗಾರು ಚುರುಕುಗೊಳ್ಳಬೇಕಿತ್ತು, ಕೃಷಿ ಚಟುವಟಿಕೆಗಳು ಚುರುಕಾಗಬೇಕಿತ್ತು. ಆದರೆ, ಮಳೆ ವಿಳಂಬವಾಗಿದ್ದು, ಮೋಡ ಬಿತ್ತನೆಗೆ ಚಿಂತನೆ ನಡೆದಿದೆ. ಸದ್ಯದ ಹವಾಮಾನ ಪರಿಸ್ಥಿತಿ ಗಮನಿಸಿದಾಗ ಎರಡು ದಿನಗಳಲ್ಲಿ ಮಳೆಯಾಗುವ ಸಾಧ್ಯತೆಯಿದ್ದು, ಮಳೆಯಾಗದಿದ್ದರೆ ಮೋಡ ಬಿತ್ತನೆ ಕಾರ್ಯ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.