ಮಂಡ್ಯ: ಕೃಷಿ ಇಲಾಖೆ ಯೋಜನೆ ಮತ್ತು ಸೌಲಭ್ಯಗಳ ಕುರಿತಾಗಿ ಮಾಹಿತಿ ನೀಡಲು ಆ್ಯಪ್ ಸಿದ್ಧಪಡಿಸಲಾಗುತ್ತಿದ್ದು, ಶೀಘ್ರವೇ ಬಿಡುಗಡೆ ಮಾಡುವುದಾಗಿ ಕೃಷಿ ಸಚಿವ ಎನ್. ಚೆಲುವರಾಯಸ್ವಾಮಿ ತಿಳಿಸಿದ್ದಾರೆ.
ನಾಗಮಂಗಲ ತಾಲೂಕಿನ ಬಿಂಡಿಗನಬಿಲೆ ತಿಟ್ಟನಹೊಸಹಳ್ಳಿ ಗ್ರಾಮದಲ್ಲಿ ರಾಷ್ಟ್ರೀಯ ಸುಸ್ಥಿರ ಕೃಷಿ ಅಭಿವೃದ್ಧಿ ಯೋಜನೆ ಅಡಿ ರೈತರಿಗೆ ಕೃಷಿ ಯಂತ್ರೋಪಕರಣ ವಿತರಿಸಿ ಅವರು ಮಾತನಾಡಿ, ಆ್ಯಪ್ ಮೂಲಕ ರೈತರು ತಾವು ಇರುವಲ್ಲಿಯೇ ಕೃಷಿ ಇಲಾಖೆಯ ಮಾಹಿತಿ ತಿಳಿಯುವುದರ ಜೊತೆಗೆ ಸೌಲಭ್ಯಗಳನ್ನು ಪಡೆಯಲು ಅನುಕೂಲವಾಗುವಂತೆ ಅಪ್ಲಿಕೇಶನ್ ಸಿದ್ಧಪಡಿಸಲಾಗುತ್ತಿದೆ ಎಂದು ಹೇಳಿದರು.
ರೈತರು ಸಮಗ್ರ ಕೃಷಿ ಮತ್ತು ವೈಜ್ಞಾನಿಕ ಕೃಷಿಯತ್ತ ಗಮನಹರಿಸಬೇಕು. ಒಣಭೂಮಿಯಲ್ಲಿ ವ್ಯವಸಾಯ ಮಾಡುವುದು ಹೇಗೆ? ಯಾವ ವಾತಾವರಣಕ್ಕೆ ಯಾವ ಬೆಳೆ ಬೆಳೆಯಬೇಕು ಎಂಬ ಮಾಹಿತಿಯನ್ನು ಅಧಿಕಾರಿಗಳು ನೀಡಲಿದ್ದಾರೆ. ಸರ್ಕಾರದಿಂದಲೂ ಜಾಗೃತಿ ಮೂಡಿಸಲಾಗುತ್ತದೆ. ಅದನ್ನು ತಿಳಿಕೊಳ್ಳುವ ಮೂಲಕ ಕೃಷಿ ಕಾರ್ಯ ಕೈಗೊಂಡಾಗ ಲಾಭದಾಯಕ ಕೃಷಿ ಸಾಧ್ಯವಾಗಲಿದ್ದು, ರೈತರ ಆರ್ಥಿಕ ಸ್ಥಿತಿ ಸೂಧಾರಿಸಲಿದೆ ಎಂದು ಹೇಳಿದ್ದಾರೆ.