ನವದೆಹಲಿ: ದೇಶದಲ್ಲಿ ನಶಿಸಿಹೋಗಿದ್ದ ಚೀತಾಗಳನ್ನು ಮತ್ತೆ ಬೆಳೆಸುವ ಪ್ರಯತ್ನ ಮಾಡಲಾಗುತ್ತಿದೆ. ಇಂದು ಭಾರತಕ್ಕೆ ಐತಿಹಾಸಿಕ ದಿನವಾಗಿದೆ. ದಶಕಗಳ ಬಳಿಕ ದೇಶಕ್ಕೆ ಚೀತಾಗಳನ್ನು ತರಲಾಗಿದೆ ಎಂದು ಪ್ರಧಾನಿ ಮೋದಿ ಸಂತಸ ವ್ಯಕ್ತಪಡಿಸಿದ್ದಾರೆ.
ಮಧ್ಯಪ್ರದೇಶದ ಕುನೋ ನ್ಯಾಷನಲ್ ಪಾರ್ಕ್ ಗೆ 8 ಚೀತಾಗಳನ್ನು ಬಿಡುಗಡೆ ಮಾಡಿ ಮಾತನಾಡಿದ ಪ್ರಧಾನಿ ಮೋದಿ, ಭಾರತದಲ್ಲಿ ಕೆಲವು ವಿಶಿಷ್ಟ ಪ್ರಾಣಿಗಳು ನಶಿಸಿ ಹೋಗಿವೆ. ಅಂತಹ ಪ್ರಾಣಿಗಳ ಸಂತತಿ ರಕ್ಷಣೆ ಮಾಡಬೇಕಿದೆ. ನಮೀಬಿಯಾ ಸರ್ಕಾರದ ಸಹಕಾರ ಇಲ್ಲವಾದಲ್ಲಿ 8 ಚೀತಾಗಳು ಭಾರತಕ್ಕೆ ಬರಲು ಸಾಧ್ಯವಾಗುತ್ತಿರಲಿಲ್ಲ ಎಂದು ಹೇಳಿದರು.
ಆಜಾದಿ ಕಾ ಅಮೃತ ಮಹೋತ್ಸವ ಸಂಭ್ರಮದ ಜೊತೆಗೆ ಇಂದು ಭಾರತಕ್ಕೆ ಮತ್ತೊಂದು ಹೆಮ್ಮೆಯ ದಿನ. 70 ವರ್ಷಗಳ ಬಳಿಕ ದೇಶಕ್ಕೆ ಚೀತಾಗಳ ಆಗಮನವಾಗಿವೆ. ಬೇಟೆಗಾರರಿಂದಾಗಿ ಭಾರತದಲ್ಲಿದ್ದ ಚೀತಾಗಳ ಸಂತತಿ ನಾಶವಾಗಿತ್ತು. 1952ರಲ್ಲಿ ಭಾರತದಲ್ಲಿ ಚೀತಾ ಸಂತತಿ ನಿರ್ನಾಮ ಎಂದು ಘೋಷಿಸಲಾಗಿತ್ತು. ಚೀತಾಗಳ ಪುನರ್ ಸಂತತಿಗೆ ಪ್ರಾಮಾಣಿಕ ಪ್ರಯತ್ನ ಆಗಿರಲಿಲ್ಲ. ನಶಿಸಿಹೋಗಿದ್ದ ಚೀತಾ ಸಂತತಿ ರಕ್ಷಿಸಲು ನಾವು ನಿರ್ಧರಿಸಿದೆವು. ರಾಜತಾಂತ್ರಿಕವಾಗಿ ಇದು ಮಹತ್ವವಲ್ಲ, ಆದರೆ ಪ್ರಕೃತಿ, ಪರಿಸರ ಸಂರಕ್ಷಣೆಯಿಂದ ಜೀವ ಸಂಕುಲ ಬೆಳವಣಿಗೆಯಾಗಲಿದೆ. ಚೀತಾ ಸಂತತಿ ಬೆಳವಣಿಗೆಯಿಂದ ಟೂರಿಸಂಗೂ ಸಹಕಾರಿ. ಇಂದು ನನಗೆ ಬಹಳ ಸಂತಸವಾಗುತ್ತಿದೆ. ನಶಿಸಿ ಹೋಗಿದ್ದ ಚೀತಾಗಳು ಮತ್ತೆ ದೇಶಕ್ಕೆ ಬಂದಿವೆ ಎಂದು ತಿಳಿಸಿದರು.