ಚಾಮರಾಜನಗರ: ಚಿರತೆಯನ್ನು ಸೆರೆ ಹಿಡಿಯಲೆಂದು ಅರಣ್ಯ ಇಲಾಖೆ ಇಟ್ಟಿದ್ದ ಬೋನಿಗೆ ವ್ಯಕ್ತಿಯೊಬ್ಬರು ಬಿದ್ದು ಪರದಾಡಿದ ಘಟನೆ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಪಡಗೂರು ಗ್ರಾಮದಲ್ಲಿ ನಡೆದಿದೆ.
ಹನುಮಯ್ಯ ಬೋನಿಗೆ ಬಿದ್ದ ವ್ಯಕ್ತಿ. ಜಾನುವಾರಿಗಳ ಮೇಲೆ ಚಿರತೆ ನಿರಂತರ ದಾಳಿ ಮಾಡುತ್ತಿದ್ದ ಹಿನ್ನೆಲೆಯಲ್ಲಿ ಚಿರತೆ ಸೆರೆಗಾಗಿ ಅರಣ್ಯ ಇಲಾಖೆ ಸಿಬ್ಬಂದಿ ಮಹಾದೇವಸ್ವಾಮಿ ಎಂಬುವವರ ಜಮೀನಲ್ಲಿ ಬೋನು ಇಟ್ಟು ಕರುವನ್ನು ಕಟ್ಟಿಹಾಕಿದ್ದರು. ಹನುಮಯ್ಯ ಎಂಬುವವರು ಚಿರತೆಗೆ ಇಟ್ಟ ಬೋನಿನೊಳಗೆ ಹೋಗುತ್ತಿದ್ದಂತೆ ಬಾಗಿಲು ಬಂದ್ ಆಗಿದೆ. ಹೊರಬರಲಾಗದೇ ಐದಾರು ಗಂಟೆ ಬೋನಿನೊಳಗೆ ಪರದಾಡಿದ್ದಾರೆ.
ಇದನ್ನು ಕಂಡ ಸ್ಥಳೀಯರು ಅರಣ್ಯ ಇಲಾಖೆ ಸಿಬ್ಬಂದಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕಾಗಮಿಸಿದ ಸಿಬ್ಬಂದಿ ವ್ಯಕ್ತಿಯನ್ನು ಬೋನಿನಿಂದ ಹೊರ ತಂದಿದ್ದಾರೆ.