
ನವದೆಹಲಿ: 2024ರ ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಭಾಗವಹಿಸುವ ಭಾರತೀಯ ಅಥ್ಲೀಟ್‌ಗಳಿಗೆ ಹುರಿದುಂಬಿಸುವಂತೆ ಪ್ರಧಾನಿ ನರೇಂದ್ರ ಮೋದಿ ಭಾನುವಾರ ದೇಶದ ನಾಗರಿಕರಿಗೆ ಕರೆ ನೀಡಿದ್ದಾರೆ.
ತಮ್ಮ ಮಾಸಿಕ ರೇಡಿಯೊ ಕಾರ್ಯಕ್ರಮ ‘ಮನ್ ಕಿ ಬಾತ್’ ಮೂಲಕ ದೇಶದ ಜನರನ್ನುದ್ದೇಶಿಸಿ ಅವರು ಮಾತನಾಡಿದ್ದಾರೆ. ಲೋಕಸಭೆ ಚುನಾವಣೆಯ ನಂತರ ಇದು ಅವರ ಎರಡನೇ ಭಾಷಣ ಮತ್ತು 2024-25ರ ಕೇಂದ್ರ ಬಜೆಟ್ ಮಂಡನೆ ನಂತರ ಮೊದಲ ಭಾಷಣವಾಗಿದೆ.
ಪ್ಯಾರಿಸ್ ಒಲಿಂಪಿಕ್ಸ್ ಇಡೀ ಜಗತ್ತನ್ನು ಹಿಡಿದಿಟ್ಟುಕೊಂಡಿದೆ. ಕ್ರೀಡಾಕೂಟವು ನಮ್ಮ ಕ್ರೀಡಾಪಟುಗಳಿಗೆ ರಾಷ್ಟ್ರವನ್ನು ಹೆಮ್ಮೆಪಡಿಸಲು ಮತ್ತು ಅಂತರರಾಷ್ಟ್ರೀಯ ವೇದಿಕೆಯಲ್ಲಿ ನಮ್ಮ ತ್ರಿವರ್ಣ ಧ್ವಜವನ್ನು ಬೀಸುವ ಅವಕಾಶವನ್ನು ಒದಗಿಸುತ್ತದೆ. ಅವರನ್ನು ಹುರಿದುಂಬಿಸಲು ನಾನು ನಿಮ್ಮಲ್ಲಿ ಮನವಿ ಮಾಡುತ್ತೇನೆ ಎಂದು ಹೇಳಿದ್ದಾರೆ.
ಅಂತಾರಾಷ್ಟ್ರೀಯ ಗಣಿತ ಒಲಿಂಪಿಯಾಡ್‌ನಲ್ಲಿ 100 ಕ್ಕೂ ಹೆಚ್ಚು ದೇಶಗಳ ಯುವಕರು ಭಾಗವಹಿಸಿದ್ದು, ನಮ್ಮ ತಂಡವು ಒಟ್ಟಾರೆಯಾಗಿ ಅಗ್ರ ಐದರಲ್ಲಿ ಯಶಸ್ವಿಯಾಗಿ ಸ್ಥಾನ ಪಡೆದಿದೆ.
ಪುಣೆಯ ಆದಿತ್ಯ ವೆಂಕಟ್ ಗಣೇಶ್, ಪುಣೆಯ ಸಿದ್ಧಾರ್ಥ್ ಚೋಪ್ರಾ, ದೆಹಲಿಯ ಅರ್ಜುನ್ ಗುಪ್ತಾ, ಗ್ರೇಟರ್ ನೋಯ್ಡಾದ ಕನವ್ ತಲ್ವಾರ್, ಮುಂಬೈನ ರುಶಿಲ್ ಮಾಥುರ್ ಮತ್ತು ಗುವಾಹಟಿಯ ಆನಂದೋ ಭಾದುರಿ ದೇಶಕ್ಕೆ ಕೀರ್ತಿ ತಂದಿದ್ದಾರೆ ಎಂದು ಶ್ಲಾಘಿಸಿದ್ದಾರೆ.
ತಮ್ಮ ರೇಡಿಯೊ ಕಾರ್ಯಕ್ರಮದ ಹಿಂದಿನ ಸಂಚಿಕೆಯಲ್ಲಿಯೂ ಸಹ ಮೋದಿ ಅವರು ಒಲಿಂಪಿಕ್ ಕ್ರೀಡಾಕೂಟದ ಅಥ್ಲೀಟ್‌ಗಳ ಬಗ್ಗೆ ಮಾತನಾಡಿದ್ದರು.