ಬೆಂಗಳೂರು: ಹೊಸ ವರ್ಷಾಚರಣೆ ದಿನ ಬೆಂಗಳೂರಿನಾದ್ಯಂತ ಎಲ್ಲೆಡೆ ಡ್ರಂಕ್ & ಡ್ರೈವ್ ತಪಾಸಣೆ ನಡೆಸಲಾಗುವುದು ಎಂದು ಬೆಂಗಳೂರು ನಗರ ಸಂಚಾರಿ ವಿಶೇಷ ಆಯುಕ್ತ ಸಲೀಂ ತಿಳಿಸಿದ್ದಾರೆ.
ಡಿಸೆಂಬರ್ 31ರ ರಾತ್ರಿ 9 ಗಂಟೆ ಬಳಿಕ ನಗರದ 30 ಫ್ಲೈಓವರ್ ಗಳನ್ನು ಬಂದ್ ಮಾಡಲಾಗುತ್ತಿದೆ. ಏರ್ ಪೋರ್ಟ್ ಫ್ಲೈ ಓವರ್ ಮೇಲೆ ಬೈಕ್ ಸಂಚಾರಕ್ಕೆ ಅವಕಾಶವಿಲ್ಲ. ನೈಸ್ ರಸ್ತೆಯಲ್ಲಿಯೂ ರಾತ್ರಿ 9 ಗಂಟೆ ಬಳಿಕ ಬೈಕ್ ಸಂಚಾರ ನಿರ್ಬಂಧಿಸಲಾಗುವುದು ಎಂದರು.
ಹೊಸ ವರ್ಷಾಚರಣೆಯಲ್ಲಿ ವೀಲಿಂಗ್ ಮಾಡುವವರಿಗೂ ಕಡಿವಾಣ ಹಾಕಲಾಗಿದೆ. ಬೆಂಗಳೂರಿನ ಪ್ರಮುಖ ಪ್ರದೇಶಗಳಾದ ಎಂ.ಜಿ.ರಸ್ತೆ, ಬ್ರಿಗೇಡ್ ರಸ್ತೆ, ಇಂದಿರಾ ನಗರ, ಕೋರಮಂಗಲ ಸೇರಿದಂತೆ ಹಲವೆಡೆಗಳಲ್ಲಿ ಹೆಚ್ಚಿನ ಭದ್ರತೆಗೆ ಸೂಚಿಸಲಾಗಿದೆ. ಎಲ್ಲೆಡೆ ಸಿಸಿಟಿವಿ ಕಣ್ಗಾವಲು ಹಾಕಲಾಗಿದೆ. ಮೆಟ್ರೋ, ಬಿಎಂಟಿಸಿ ಸಂಚಾರ ಅವಧಿ ವಿಸ್ತರಿಸಲಾಗುವುದು ಎಂದು ತಿಳಿಸಿದರು.