ಬೆಂಗಳೂರು: ಬೈಂದೂರು ಮೂಲದ ಉದ್ಯಮಿಯೊಬ್ಬರಿಗೆ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ಕೊಡಿಸುವುದಾಗಿ ಹೇಳಿ 5 ಕೋಟಿ ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಹೋರಾಟಗಾರ್ತಿ, ಹಿಂದೂ ನಾಯಕಿ ಚೈತ್ರಾ ಕುಂದಾಪುರ ಬಂಧನದ ಬೆನ್ನಲ್ಲೇ ಒಟ್ಟು 6 ಆರೋಪಿಗಳನ್ನು ಬೆಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಪ್ರಕರಣದ ಪ್ರಮುಖ ಆರೋಪಿ ಚೈತ್ರಾ ಕುಂದಾಪುರ, ಗಗನ್, ಧನರಾಜ್, ರಾಜಕೀಯ ಮುಖಂಡ, ಸ್ವಾಮೀಜಿ ಹಾಗೂ ಇನ್ನೋರ್ವ ಸಾಮಾಜಿಕ ಹೋರಾಟಗಾರ ಸೇರಿ ಒಟ್ಟು 6 ಜನರನ್ನು ಬಂಧಿಸಲಾಗಿದೆ ಎಂದು ಬೆಂಗಳೂರು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.
ಬೈಂದೂರು ಕ್ಷೇತ್ರದ ಬಿಜೆಪಿ ಟಿಕೆಟ್ ಕೊಡಿಸುವುದಾಗಿ ಹೇಳಿ ಉದ್ಯಮಿ ಗೋವಿಂದ ಬಾಬು ಎಂಬುವವರಿಗೆ ಚೈತ್ರಾ ಕುಂದಾಪುರ ಹಾಗೂ ಗ್ಯಾಂಗ್ ಬರೋಬ್ಬರಿ 5 ಕೋಟಿ ವಂಚಿಸಿತ್ತು. ಕಬಾಬ್ ಮಾರುವ ವ್ಯಕ್ತಿ, ಸಲೂನ್ ಮೇಕಪ್ ಮ್ಯಾನ್ ಹಾಗೂ ಇನ್ನೋರ್ವನಿಗೆ ಆರ್.ಎಸ್.ಎಸ್ ಮುಖಂಡನ ವೇಷ, ಬಿಜೆಪಿ ಕೇಂದ್ರ ನಾಯಕರ ವೇಷ ತೊಡಿಸಿ ನಾಟಕವಾಡಲು ರಂಗತಾಲೀಮು ನಡೆಸಿ ಉದ್ಯಮಿಯನ್ನು ವಂಚಿಸಿದ್ದರು. ಚುನಾವಣೆ ವೇಳೆ ಟಿಕೆಟ್ ಸಿಗದಿದ್ದಾಗ ಉದ್ಯಮಿ ಹಣ ವಾಪಸ್ ಕೇಳಿದ್ದರು ಈ ವೇಳೆ ಚೈತ್ರಾ ಕುಂದಾಪುರ ತನಗೇ ಮೋಸ ಆಗಿದೆ ಎಂದು ಮತ್ತೊಂದು ಡ್ರಾಮಾ ಮಾಡಿದ್ದರು. ತಾನು ಮೋಸ ಹೋಗಿದ್ದು ಗೊತ್ತಾಗುತ್ತಿದ್ದಂತೆ ಉದ್ಯಮಿ ಗೋವಿಂದ ಬಾಬು, ಚೈತ್ರಾ ಹಾಗೂ ಗ್ಯಾಂಗ್ ಬಗ್ಗೆ ಸಾಕ್ಷಿ ಸಮೇತವಾಗಿ ಮಾಹಿತಿ ಸಂಗ್ರಹಿಸಿ ಬಂಡೆಪಾಳ್ಯ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಪ್ರಕರಣ ಸಿಸಿಬಿಗೆ ವರ್ಗಾವಣೆಯಾಗಿತ್ತು. ಇದೀಗ ಚೈತ್ರಾ ಕುಂದಾಪುರ ಹಾಗೂ ಗ್ಯಾಂಗ್ ನ್ನು ಪೊಲೀಸರು ಬಂಧಿಸಿದ್ದಾರೆ.