ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಉದ್ಯಮಿಗಳು, ಜಿಎಸ್ ಟಿ ಆಫೀಸರ್ ಗಳ ಹೆಸರಲ್ಲಿ ವಂಚಿಸಿ, ಹಣ ದೋಚುತ್ತಿದ್ದ ಖತರ್ನಾಕ್ ಆರೋಪಿಯನ್ನು ಬೆಂಗಳೂರಿನ ಮಲ್ಲೇಶ್ವರಂ ಪೊಲೀಸರು ಬಂಧಿಸಿದ್ದಾರೆ.
ಯೂಸೂಫ್ ಬಂಧಿತ ಆರೋಪಿ. ಆರೋಪಿ ತನಗೆ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಪರಿಚಯವಿದೆ. ಬಿಜೆಪಿ ಹೈಕಮಾಂಡ್ ಪರಿಚಯವೂ ಇದೆ. ನಿಮ್ಮ ರಾಜಕೀಯ ಕೆಲಸ ಮಾಡಿಕೊಡುವುದಾಗಿ ಹೇಳಿ ನಂಬಿಸಿ ಲಕ್ಷಾಂತರ ರೂಪಾಯಿ ಹಣ ಪಡೆದು ಹಲವರನ್ನು ವಂಚಿಸುತ್ತಿದ್ದ.
ಉದ್ಯಮಿಗಳನ್ನು ಪರಿಚಯಿಸಿಕೊಂಡು ಅವರ ಬಗ್ಗೆ ತಿಳಿದುಕೊಳ್ಳುತ್ತಿದ್ದ ಆರೋಪಿ ಯೂಸೂಫ್, ಅವರ ಅವಶ್ಯಕತೆಗಳಿಗೆ ತಕ್ಕಂತೆ ತನ್ನ ವೃತ್ತಿಯನ್ನು ಹೇಳಿಕೊಳ್ಳುತ್ತಿದ್ದ. ಇದೇ ರೀತಿ ಟ್ರ್ಯಾವಲ್ ಮಾಲೀಕರೊಬ್ಬರನ್ನು ವಂಚಿಸಿದ್ದ ಆಸಾಮಿ. ಟ್ರ್ಯಾವಲ್ ಮಾಲೀಕರು ಜಿಎಸ್ ಟಿ ಕಟ್ಟುವುದು ಬಾಕಿ ಇತ್ತು. ಇದನ್ನು ತಿಳಿದುಕೊಂಡ ಆರೋಪಿ ಯೂಸೂಫ್ ತನಗೆ ಜಿಎಸ್ ಟಿ ಕಮಿಷನರ್ ಪರಿಚಯವಿದೆ. ತಾನು ಮಾತನಾಡುತ್ತೇನೆ ಎಂದು ಹೇಳಿ 15 ಲಕ್ಷ ಅಡ್ವಾನ್ಸ್ ಹಣ ಪಡೆದು ಎಸ್ಕೇಪ್ ಆಗಿದ್ದಾನೆ.
ಬ್ಯಾಂಕ್ ಲೋನ್ ಪಡೆಯುವವರನ್ನೂ ಟಾರ್ಗೆಟ್ ಮಾಡಿ ಲೋನ್ ಕೊಡಿಸುವುದಾಗಿ ಹೇಳಿ ವಂಚಿಸುತ್ತಿದ್ದ. ಈತನ ವಿರುದ್ಧ ವಿವಿಧ ಠಾಣೆಗಳಲ್ಲಿ ಪ್ರಕರಣ ದಾಖಲಾಗಿತ್ತು. ಇದೀಗ ಮಲ್ಲೇಶ್ವರಂ ಪೊಲೀಸರು ಆರೋಪಿ ಯೂಸೂಫ್ ನನ್ನು ಬಂಧಿಸಿದ್ದು, ಆತನ ವಿರುದ್ಧದ ಒಂದು ಪ್ರಕರಣವನ್ನು ಸಿಸಿಬಿಗೆ ವರ್ಗಾವಣೆ ಮಾಡಿದ್ದಾರೆ.