ಬೆಂಗಳೂರು: ಹಣ ಡಬಲ್ ಮಾಡಿಕೊಡುವುದಾಗಿ ಹೇಳಿ ವಂಚಿಸುತ್ತಿದ್ದ ಆರೋಪಿಯನ್ನು ಬೆಂಗಳೂರಿನ ಸುಬ್ರಹ್ಮಣ್ಯನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಕಿಶನ್ ಅಲಿಯಾಸ್ ಮಾಕಳಿ ಕಿಶನ್ ಬಂಧಿತ ಆರೋಪಿ. ಕಿಂಗ್ ರಿಯಲ್ ಎಸ್ಟೇಟ್ ಕಂಪನಿ ನಡೆಸುತ್ತಿದ್ದ. ಟ್ರೇಡಿಂಗ್ ಹೆಸರಲ್ಲಿ ವಿಡಿಯೋಗಳಲ್ಲಿ ಕಂತೆ ಕಂತೆ ಹಣ ತೋರಿಸಿ, ಅಮಾಯಕರಿಗೆ ಹಣ ಡಬಲ್ ಮಾಡಿಕೊಡುತ್ತೇನೆ, ಹೂಡಿಕೆ ಮಾಡಿದರೆ ಅಧಿಕ ಲಾಭಾಂಶ ಕೊಡುವುದಾಗಿ ನಂಬಿಸಿ ಲಕ್ಷ ಲಕ್ಷ ಹಣ ಪಡೆದು ಎಸ್ಕೇಪ್ ಆಗುತ್ತಿದ್ದ.
ಕಿಶನ್ ನಿಂದ ಹಣ ಕಳೆದುಕೊಂಡಿದ್ದ ಗುಣನಿಧಿ ಎಂಬುವವರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಆರೋಪಿ ವಿರುದ್ಧ ವಂಚನೆ ಕೇಸ್ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು. ಗುಣನಿಧಿ ಬಳಿಯಿಂದ 15.15 ಲಕ್ಷ ಹಣವನ್ನು ಹೂಡಿಕೆ ಮಾಡಿಕೊಂಡಿದ್ದ ಕಿಶನ್ ನ್ನು ಸದ್ಯ ಪೊಲೀಸರು ಬಂಧಿಸಿದ್ದಾರೆ.
ಕಿಶನ್ ನಿಂದ ನೂರಾರು ಜನರು ಇದೇ ರೀತಿ ಮೋಸ ಹೋಗಿದ್ದಾರೆ ಎಂದು ತಿಳಿದುಬಂದಿದೆ. ಈತನಿಂದ ವಂಚನೆಗೊಳಗಾದವರು ಬಂದು ದೂರು ನೀಡುವಂತೆ ಉತ್ತರ ವಿಭಾಗದ ಡಿಸಿಪಿ ಸೈದುಲ್ ಅಡಾಲತ್ ತಿಳಿಸಿದ್ದಾರೆ.