ಬೆಂಗಳೂರು: ಜಾರಿ ನಿರ್ದೇಶನಾಲಯ, ಆರ್ ಬಿಐ ಹೆಸರು ಹೇಳಿ ಹಣ ದುಪ್ಪಟ್ಟು ಮಾಡಿಕೊಡುತ್ತೇವೆ ನಮ್ಮ ಬಳಿ ಹೂಡಿಕೆ ಮಾಡಿ ಎಂದು ಹೇಳಿ ಮಹಿಳೆಯ ಗ್ಯಾಂಗ್ ಒಂದು ಕೋಟಿ ಕೋಟಿ ರೂಪಾಯಿ ವಂಚಿಸಿ, ಮೋಸ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.
ಜನರಿಗೆ ಕೋಟ್ಯಂತರ ರೂಪಾಯಿ ವಂಚಿಸಿದ್ದ ಮಹಿಳೆ ಸೇರಿದಂತೆ 7 ಆರೋಪಿಗಳನ್ನು ಬೆಂಗಳೂರಿನ ಹೆಬ್ಬಾಳ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಮಹಿಳೆ ಚನ್ನರಾಯಪಟ್ಟಣ ಮೂಲದ ಕಲ್ಪನಾ (47) ಎಂದು ತಿಳಿದುಬಂದಿದೆ.
ಕೋವಿಡ್ ಸಂದರ್ಭದಲ್ಲಿ ನಿವೃತ್ತ ಬ್ಯಾಂಕ್ ಮ್ಯಾನೇಜರ್ ನಾಗೇಶ್ವರ್ ರಾವ್ ಹಾಗೂ ಸುರಜಿತ ಎಂಬುವವರು ತಮ್ಮ ಸಂಬಂಧಿಕರಾದ ಮಾಲಾ ಮತ್ತು ರಮೇಶ್ ಎಂಬುವವರನ್ನು ಕಲ್ಪನಾಗೆ ಪರಿಚಯಿಸಿದ್ದರು. ಬಳಿಕ ಕಲ್ಪನಾ ಕುಡುಮುಡಿಯಲ್ಲಿ ನಮ್ಮದು 100 ಕೋಟಿ ಆಸ್ತಿ ಇದೆ. ಕೋರ್ಟ್ ನಲ್ಲಿ ಕೇಸ್ ನಮ್ಮ ಪರವಾಗಿ ಆಗಿದೆ. ದಾಖಲೆಗಳನ್ನು ತೆಗೆದುಕೊಳ್ಳಲು ನನಗೆ ತುರ್ತಾಗಿ 15 ಲಕ್ಷ ಹಣ ಬೇಕು 15 ದಿನಗಳಲ್ಲಿ ಶೇ.3ರಷ್ಟು ಬಡ್ಡಿ ಸೇರಿಸಿ ಹಣ ವಾಪಾಸ್ ಕೊಡುತ್ತೇನೆ ಎಂದು ಹೇಳಿ ಹಣ ಪಡೆದಿದ್ದಾಳೆ.
15 ದಿನಗಳ ಬಳಿಕ ಕಲ್ಪಾನಾ ಬಳಿ ಹಣ ಕೇಳಿದಾಗ ನಾವು ಕಪ್ಪು ಹಣವನ್ನು ಕಾನೂನು ಬದ್ಧ ಹಣವಾಗಿ ಪರಿವರ್ತಿಸುತ್ತೇವೆ. ನೂರು ಕೋಟಿ ರೂಗೆ ಶೇ.30ರಂತೆ 30ಕೋಟಿ ರೂ.ಕಟ್ಟಬೇಕು, ನೀವು ನಮಗೆ ಕೊಟ್ಟಿರುವ ಹಣಕ್ಕೆ ಅದರ ಹತ್ತುಪಟ್ಟು ಹೆಚ್ಚುವರಿ ಹಣ ಕೊಡುತ್ತೇವೆ. ಹಾಗೂ 2 ಕೆಜಿ ಚಿನ್ನ, 20 ಕೆಜಿ ಬೆಳ್ಳಿ ವಿಗ್ರಹಗಳನ್ನು ನಿಮಗೆ ಕೊಡುತ್ತೇವೆ. ಆರ್ ಬಿಐ ಉನ್ನತಾಧಿಕಾರಿಗಳು ನಮ್ಮ ಜೊತೆ ಇರುತಾರೆ. ವರುಣ್ ಎಂಬುವವರು ಇಡಿ ಇಲಾಖೆಯಲ್ಲಿ ಕೆಲಸ ಮಾಡುತ್ತಾರೆ. ಗೋಡೌನ್ ನಲ್ಲಿ ಕಂತೆ ಕಂತೆ ಹಣ ಇಡಲಾಗಿದ್ದು, ಅದಕ್ಕೆ ಔಷಧಿ ಹಾಕಬೇಕು. ಇಲ್ಲವಾದಲ್ಲಿ ಹಣ ಒಂದೊಕ್ಕೊಂದು ಅಂಟಿಕೊಂಡು ಹಾಳಾಗುತ್ತದೆ. ಹಣ ಈಗಲೇ ಕೊಟ್ಟರೆ 2-3ದಿನಗಳಲ್ಲಿ ಹತ್ತುಪಟ್ಟು ಹೆಚ್ಚು ಹಣ ಕೊಡುತ್ತೇನೆ ಎಂದಿದ್ದಾಳೆ. ಆಕೆ ಮಾತು ನಂಬಿ ಮಾಲಾ ಹಾಗೂ ರಮೇಶ್ ಒಟ್ಟು 4 ಕೋಟಿ ಹಣವನ್ನು ನಾಗೇಶ್ವರ್ ರಾವ್ ಪತ್ನಿ ಸುರಜಿತಾ, ಕಲ್ಪನಾ, ದಿಲೀಪ್, ತರುಣ್, ಗೌತಮ್ ಚಾಲಕ ಮಂಜು ಎಂಬುವವರಿಗೆ ನೀಡಿದ್ದಾರೆ.
ಬಳಿಕ ಹಣ ವಾಪಾಸ್ ಕೇಳಿದಾಗ ಜೀವ ಬೆದರಿಕೆ ಹಾಕಲಾರಂಭಿಸಿದ್ದಾರೆ. ವಂಚನೆಗೊಳಗಾದವರು ಹೆಬ್ಬಾಳ ಠಾಣೆಯಲ್ಲಿ ದೂರು ನೀಡಿದ್ದಾರೆ. ಪ್ರಕರಣ ದಖಲಿಸಿಕೊಂಡ ಪೊಲೀಸರು ಕಲ್ಪನಾ ಸೇರಿ 7 ಆರೋಪಿಗಳನ್ನು ಬಂಧಿಸಿದ್ದಾರೆ.