ನವದೆಹಲಿ: 500 ರೂಪಾಯಿಗೆ ಗ್ಯಾಸ್ ಸಿಲಿಂಡರ್, ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಇಳಿಕೆ ಮಾಡುವುದಾಗಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.
ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಕೈಗೊಂಡಿರುವ ‘ಭಾರತ್ ಜೋಡೋ ಯಾತ್ರೆ’ ಮುಕ್ತಾಯ ಹಂತಕ್ಕೆ ಬಂದಿದ್ದು, ಈ ಸಂದರ್ಭದಲ್ಲಿ ಚುನಾವಣೆ ಪ್ರಣಾಳಿಕೆ ಭರವಸೆಗಳ ಮೊದಲ ಪಟ್ಟಿಯನ್ನು ಪರೋಕ್ಷವಾಗಿ ಘೋಷಣೆ ಮಾಡಲಾಗಿದೆ.
ಜಮ್ಮು ಮತ್ತು ಕಾಶ್ಮೀರದ ಶ್ರೀನಗರದಲ್ಲಿ ಜನವರಿ 30ರಂದು ಭಾರತ್ ಜೋಡೋ ಯಾತ್ರೆ ಮುಕ್ತಾಯವಾಗಲಿದೆ. ರಾಹುಲ್ ಗಾಂಧಿ ದೇಶದ ಜನರಿಗೆ ಬಹಿರಂಗ ಪತ್ರ ಬರೆದಿದ್ದು, ಕಡಿಮೆ ದರದಲ್ಲಿ ಪೆಟ್ರೋಲ್, ಡೀಸೆಲ್ ಮಾರಾಟ ಮಾಡಲಾಗುವುದು. 500 ರೂ.ಗೆ ಸಿಲಿಂಡರ್ ಪೂರೈಕೆ ಮಾಡಲಾಗುವುದು ಎಂದು ತಿಳಿಸಿದ್ದಾರೆ.
ದೇಶದಲ್ಲಿ ಸೌಹಾರ್ದತೆ ಸೃಷ್ಟಿಸಲಾಗುವುದು, ರೈತರ ಕೃಷಿ ಉತ್ಪನ್ನಗಳಿಗೆ ಉತ್ತಮ ಬೆಲೆ, ಯುವಕರಿಗೆ ಉದ್ಯೋಗ, ಉದ್ದಿಮೆಗಳಿಗೆ ಪ್ರೋತ್ಸಾಹ, ಸಂಪತ್ತಿನ ಸಮಾನ ಹಂಚಿಕೆ ಮಾಡಲಾಗುವುದು ಎಂದು ರಾಹುಲ್ ಗಾಂಧಿ ದೇಶದ ಜನತೆಗೆ ಬಹಿರಂಗ ಪತ್ರ ಬರೆದಿದ್ದಾರೆ.
ಜನವರಿ 26 ರಿಂದ ಕೇಂದ್ರ ಸರ್ಕಾರದ ವಿರುದ್ಧ ಚಾರ್ಜ್ ಶೀಟ್ ಜೊತೆಗೆ ರಾಹುಲ್ ಗಾಂಧಿಯವರ ಪತ್ರವನ್ನು ಪ್ರತಿ ಮನೆಗೆ ತಲುಪಿಸುವುದಾಗಿ ಪಕ್ಷವು ಶುಕ್ರವಾರ ಪ್ರಕಟಿಸಿದೆ. ಪತ್ರಕ್ಕೆ “ಆಪ್ಕಾ ಅಪ್ನಾ ರಾಹುಲ್(ನಿಮ್ಮ ಸ್ವಂತ ರಾಹುಲ್)” ಎಂದು ಸಹಿ ಹಾಕಲಾಗಿದೆ.
ಈ ಪತ್ರವನ್ನು ಎಲ್ಲಾ ಪ್ರಾದೇಶಿಕ ಭಾಷೆಗಳಲ್ಲಿ ಬರೆಯಲಾಗಿದ್ದು, ಭಾರತ್ ಜೋಡೋ ಯಾತ್ರೆಯಿಂದ ರಾಜಕೀಯ ಲಾಭ ಪಡೆಯಲು ಕಾಂಗ್ರೆಸ್ ಪ್ರಯತ್ನ ನಡೆಸುತ್ತಿದೆ.
ರಾಹುಲ್ ಗಾಂಧಿಯವರು ತಮ್ಮ ಪತ್ರದಲ್ಲಿ ಎಲ್ಲ ವಿಷಯಗಳನ್ನು ಮುಟ್ಟಲು ಪ್ರಯತ್ನಿಸಿದ್ದಾರೆ. ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಲಕ್ಷಾಂತರ ಭಾರತೀಯರು ತಮ್ಮೊಂದಿಗೆ ನಡೆದ ಐತಿಹಾಸಿಕ, 3,500 ಕಿಮೀ ಉದ್ದದ ಭಾರತ್ ಜೋಡೋ ಯಾತ್ರೆಯನ್ನು ಪೂರ್ಣಗೊಳಿಸಿದ ನಂತರ ಇದನ್ನು ಬರೆಯಲಾಗಿದೆ ಎಂದು ಅವರು ಉಲ್ಲೇಖಿಸಿದ್ದಾರೆ.