ಬೆಂಗಳೂರು: ಬಟ್ಟೆ ಶೋ ರೂಂಗಳಿಗೆ ಹೋಗಿ ಬಟ್ಟೆ ಖರೀದಿಸುತ್ತಿದ್ದ ಚಾರ್ಟೆಡ್ ಅಕೌಂಟೆಂಟ್ ಯುವತಿಯೊಬ್ಬಳು, ಆನ್ ಲೈನ್ ಮೂಲಕ ಪೇ ಮಾಡುವುದಾಗಿ ಹೇಳಿ ವಂಚಿಸುತ್ತಿದ್ದ ಘಟನೆ ಬೆಳಕಿಗೆ ಬಂದಿದೆ.
ಆರೋಪಿ ಯುವತಿಯನ್ನು ಬೆಂಗಳೂರಿನ ಸದಾಶಿವನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಕೋಲಾರ ಮೂಲದ ರಶ್ಮಿ ಬಂಧಿತ ಆರೋಪಿ.
ವೃತ್ತಿಯಲ್ಲಿ ಚಾರ್ಟೆಡ್ ಅಕೌಂಟೆಂಟ್ ಆಗಿ ಕೆಲಸ ಮಾಡುತ್ತಿದ್ದ ಯುವತಿ, ಶೋ ರೂಂ ಗೆ ಹೋಗಿ 30-40 ಸಾವಿರ ರೂಪಾಯಿ ಬೆಲೆಯ ಬಟ್ಟೆಗಳನ್ನು ಖರೀದಿಸುತ್ತಿದ್ದಳು. ಬಳಿಕ ಫೋನ್ ಪೇ, ಗೂಗಲ್ ಪೇ ಮಡುವುದಾಗಿ ಹೇಳಿ ಹೆಸರು, ಮೊಬೈಲ್ ನಂಬರ್ ಗಳನ್ನು ಅಂಗಡಿ ಮಾಲೀಕರಿಗೆ ಕೊಟ್ಟು ಎಸ್ಕೇಪ್ ಆಗುತ್ತಿದ್ದಳು. ಎಷ್ಟೊತ್ತಾದರೂ ಆನ್ ಲೈನ್ ಹಣ ಪಾವತಿ ಆಗದಿದ್ದಾಗ ಯುವತಿ ನೀಡಿದ್ದ ನಂಬರ್ ಗೆ ಕರೆ ಮಾಡಿದರೆ ಕರೆ ಸ್ವೀಕರಿಸುತ್ತಿರಲಿಲ್ಲ. ಇನ್ನು ಹಲವೆಡೆ ತನ್ನ ಮೊಬೈಲ್ ನಂಬರ್ ಬದಲಾಗಿ ಬೇರೊಬ್ಬರ ಮೊಬೈಲ್ ನಂಬರ್ ಕೊಟ್ಟು ಯಾಮಾರಿಸುತ್ತಿದ್ದಳು. ಶೋ ರೂಂ ಮಾಲೀಕರು ಕರೆ ಮಾಡಿದರೆ ರಾಂಗ್ ನಂಬರ್ ಎಂದು ಹೇಳುತ್ತಿದ್ದರು.
ಕೆಲ ದಿನಗಳ ಹಿಂದಷ್ಟೇ ಸದಾಶಿವನಗರದ ಪ್ರತಿಷ್ಠಿತ ಬಟ್ಟೆ ಅಂಗಡಿಗೆ ತೆರಳಿದ್ದ ಯುವತಿ ಅಲ್ಲಿಯೂ ಹೀಗೆ ವಂಚಿಸಿದ್ದಳು. ಶೋ ರೂಂ ನವರು ಯುವತಿ ವಿರುದ್ಧ ಸದಾಶಿವನಗರ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಇದೀಗ ಪೊಲೀಸರು ಆರೋಪಿ ಯುವತಿಯನ್ನು ಬಂಧಿಸಿದ್ದಾರೆ.