ಹಾಸನ: ಸಮಾಜ ಸೇವೆ, ಮಾನವೀಯತೆಗೆ ಹೆಸರಾಗಿರುವ ಚಾರ್ಮಾಡಿ ಹಸನಬ್ಬ ಅವರು ತಮ್ಮದೇ ಸ್ವಂತ ಹಣದಿಂದ ಮತ್ತೊಂದು ಮಾನವೀಯ ಸೇವೆಗೆ ಮುಂದಾಗಿದ್ದಾರೆ.
ಚಾರ್ಮಾಡಿ ಘಾಟ್ ನಲ್ಲಿ ಸಂಕಷ್ಟಕ್ಕೆ ಸಿಲುಕಿದವರಿಗೆ ಹಲವು ವರ್ಷಗಳಿಂದ ಸಹಾಯ ಮಾಡುತ್ತ ಮಾನವೀಯತೆ ಮೆರೆಯುತ್ತಿದ್ದ ಚಾರ್ಮಾಡಿ ಹಸನಬ್ಬ ಅವರಿಗೆ ರಾಜ್ಯ ಸರ್ಕಾರ 2023ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಿ ಗೌರವಿಸಿತ್ತು. ಗೌರವ ಪ್ರಶಸ್ತಿ ಜೊತೆಗೆ 5 ಲಕ್ಷ ರೂಪಾಯಿ ನಗದನ್ನು ನೀಡಿತ್ತು. ಇದೀಗ ಈ ಹಣವನ್ನು ಜನರ ಸೇವೆಗೆ ಬಳಸಲು ಹಸನಬ್ಬ ನಿರ್ಧರಿಸಿದ್ದಾರೆ.
ಸರ್ಕಾರ ನೀಡಿರುವ ಬಹುಮಾನದ ಹಣ ಹಾಗೂ ಅದರ ಜೊತೆ ಸಾಲವನ್ನೂ ಮಾಡಿ ಜನಸೇವೆಗೆ ಉಪಯೋಗವಾಗಲಿ ಎಂದು ಆಂಬುಲೆನ್ಸ್ ಖರೀದಿ ಮಾಡಿದ್ದಾರೆ. ಈ ಆಂಬುಲೆನ್ಸ್ ಚಾರ್ಮಾಡಿ ಹಾಗೂ ಸುತ್ತಮುತ್ತ 50 ಕಿಲೋಮೀಟರು ವರೆಗೆ ಉಚಿತ ಸೇವೆಯನ್ನು ನೀಡಲಿದೆ.
ತಮ್ಮ ಸಮಾಜ ಸೇವೆಯಿಂದಲೇ ಹೆಸರಾಗಿರುವ ಚಾರ್ಮಾಡಿ ಹಸನಬ್ಬ ಅವರಿಗೆ ರಾಜ್ಯೋತ್ಸವ ಸೇರಿದಂತೆ ಹಲವು ಪ್ರಶಸ್ತಿಗಳು ಬಂದಿವೆ. ಇದೀಗ ಸಮಾಜ ಸೇವೆಯಲ್ಲಿ ತಮ್ಮನ್ನು ಇನ್ನಷ್ಟು ತೊಡಗಿಸಿಕೊಳ್ಳುವ ನಿಟ್ಟಿನಲ್ಲಿ “ಚಾರ್ಮಾಡಿ ಹಸನಬ್ಬ ಚಾರಿಟೇಬಲ್ ಟ್ರಸ್ಟ್” ಅನ್ನು ಸ್ಥಾಪನೆ ಮಾಡಿದ್ದು, ಶೀಘ್ರದಲ್ಲಿಯೇ ಚಾರ್ಮಾಡಿಯಲ್ಲಿ ಹಸನಬ್ಬ ಅವರ ಆಂಬುಲೆನ್ಸ್ ಸೇವೆ ಲಭ್ಯವಾಗಲಿದೆ.